ನವದಹೆಲಿ: ಕೆಲವು ತಿಂಗಳಿನಿಂದ ಬಿಡಿಸಲಾಗದ ಕಗ್ಗಾಂಟಾಗಿದ್ದ ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಸರಣಿ ಎಲ್ಲಿ ನಡೆಯಬೇಕು ಎಂಬು ಗೊಂದಲಕ್ಕೆ ಪೂರ್ಣವಿರಾಮ ಸಿಕ್ಕಿದೆ.
ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್(ಐಟಿಎಫ್) ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಸರಣಿಯನ್ನು ಕಜಕಿಸ್ತಾನ ರಾಜಧಾನಿ ನೂರ್-ಸುಲ್ತಾನ್‌ನಲ್ಲಿ ಆಯೋಜಿಸಲು ನಿರ್ಧರಿಸಿದೆ.
ಆದರೆ, ಈ ಮೊದಲು ಐಟಿಎಫ್ ಡೇವಿಸ್ ಕಪ್ಗೆ ಪಾಕಿಸ್ತಾನದ ಇಸ್ಲಾಮಾಬಾದ್ ನಗರವನ್ನು ಗೊತ್ತು ಮಾಡಿತ್ತು. ಭದ್ರತಾ ಕಾರಣ ಭಾರತದ ಟೆನ್ನಿಸ್ ಪಟುಗಳು ಪಾಕಿಸ್ತಾನ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕಿದ್ದರಿಂದ ಭಾರತ ಟೆನ್ನಿಸ್ ಫಡರೇಷನ್ ಐಟಿಎಫ್ ಬಳಿ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜನೆ ಮಾಡುವಂತೆ ಮನವಿ ಮಾಡಿತ್ತು. ಇದೀಗ ಆಟಗಾರರ ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದಾಗಿ ತಟಸ್ಥ ಸ್ಥಳಕ್ಕೆ ವರ್ಗಾಯಿಸಲು ಐಟಿಎಫ್‌ನ ಸ್ವತಂತ್ರ ಮಂಡಳಿ ನವೆಂಬರ್ 4ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಾಕಿಸ್ತಾನ ಟೆನಿಸ್ ಫೆಡರೇಷನ್, ಪಾಕಿಸ್ತಾನದಲ್ಲೇ ಪಂದ್ಯ ಆಯೋಜಿಸುವಂತೆ ಮನವಿ ಮಾಡಿತ್ತು. ಅಲ್ಲದೆ ಭಾರತದ ಯಾತ್ರಾರ್ಥಿಗಳು ಯಾವುದೇ ಭಯವಿಲ್ಲದೆ ಪಾಕಿಸ್ತಾನಕ್ಕೆ ಬರಬಹುದು ಎಂದಾದ ಮೇಲೆ, ಇಸ್ಲಾಮಾಬಾದ್‌ನಲ್ಲಿ ಟೆನ್ನಿಸ್ ಆಡಲು ಭಾರತ ತಂಡಕ್ಕೇಕೆ ಸಾಧ್ಯವಿಲ್ಲ ಎಂಬ ವಾದ ಮಂಡಿಸಿತ್ತು.
ಡೇವಿಸ್ ಕಪ್ ಪಂದ್ಯಗಳು ನೂರ್-ಸುಲ್ತಾನ್‌ನಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಗೆ ಐಟಿಎಫ್ ತಿಳಿಸಿದೆ ಎಂದು ಎಐಟಿಎ ಸಿಇಒ ಅಕುಓರಿ ಬಿಶ್ವದೀಪ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ, ಪಿಟಿಎಫ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಬಿಶ್ವದೀಪ್ ತಿಳಿಸಿದ್ದಾರೆ.