ಮ್ಯಾಡ್ರೀಡ್: ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಅಮೆರಿಕಾ ಓಪನ್ ಟೂರ್ನಿಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಆರ್ಭಟ ನಿಲ್ಲದ ಕಾರಣ 2020ರ ಆವೃತ್ತಿಯಿಂದ ಹಿಂದೆ ಸರಿಯಲು ನಿರ್ಧರಿಸುವುದಾಗಿ ವಿಶ್ವ ಟೆನಿಸ್ನ 2ನೇ ಶ್ರೇಯಾಂಕದ ನಡಾಲ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದಪಡಿಸಿರುವ ಪರಿಸ್ಕೃತ ಕ್ಯಾಲೆಂಡರ್ ಅನ್ನು ಅವರು 'ಅನಾಗರಿಕ' ಎಂದು ಕರೆದಿದ್ದಾರೆ.
ಅನೇಕ ಬಾರಿ ಆಲೋಚನೆ ಮಾಡಿದ ನಂತರ ನಾನು ಯುಎಸ್ ಓಪನ್ನಲ್ಲಿ ಆಡದಿರಲು ನಿರ್ಧರಿಸಿದ್ದೇನೆ. ವಿಶ್ವದಾದ್ಯಂತ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿವೆ. ಇದು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಹಾಗೆ ಕಾಣುತ್ತಿಲ್ಲ ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ.
"ಯಾವುದೇ ಆಟವಿಲ್ಲದೇ ನಾಲ್ಕು ತಿಂಗಳು ಕಳೆದಿದ್ದೇವೆ. ಈ ವರ್ಷ ಕಡಿಮೆಯಾಗಿರುವ ಟೆನಿಸ್ ಕ್ಯಾಲೆಂಡರ್ ಅನಾಗರಿಕ ಎಂದು ನಮಗೆ ತಿಳಿದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಟೂರ್ನಿಯನ್ನು ಆಯೋಜನೆ ಮಾಡುವ ಅವರ ಪ್ರಯತ್ನವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ದನ್ಯವಾದಗಳು "ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದು ನಾನು ಎಂದಿಗೂ ತೆಗೆದುಕೊಳ್ಳಲು ಬಯಸದ ನಿರ್ಧಾರ, ಆದರೆ ಈ ಬಾರಿ ನಾನು ನನ್ನ ಮನಸ್ಸಿನ ಮಾತನ್ನು ಅನುಸರಿಸಿದ್ದೇನೆ " ಎಂದು ಅವರು ತಿಳಿಸಿದ್ದಾರೆ.
ಇನ್ನು ಯುಎಸ್ ಓಪನ್ ಮುಗಿದ ಕೇವಲ 15 ದಿನಗಳಲ್ಲೇ ಫ್ರೇಂಚ್ ಓಪನ್ ನಡೆಯಲಿದೆ. ಈ ಕಾರಣದಿಂದ ಈ ವರ್ಷದ ಪರಿಷ್ಕೃತ ವೇಳಾಪಟ್ಟಿಯನ್ನು ಆನಾಗರಿಕ ಎಂದು ಟೀಕಿಸಿದ್ದಾರೆ.
ನಡಾಲ್ಗೂ ಮೊದಲು ಮಹಿಳಾ ಟೆನಿಸ್ನ ನಂಬರ್ ಒನ್ ಆಟಗಾರ್ತಿಯಾಗಿರುವ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಕೂಡ ಯುಎಸ್ ಓಪನ್ನಿಂದ ಹೊರಬಂದಿದ್ದರು. ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಜರ್ ಫೆಡರರ್ ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.ಹೀಗಾಗಿ ಈ ಬಾರಿಯ ಯುಎಸ್ ಓಪನ್ ಮಂಕಾಗಿ ಕಾಣಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.