ಹೈದರಾಬಾದ್ : ತಿಂಗಳ ಹಿಂದೆ ಒಂಬತ್ತು ಬಾರಿಯ ಚಾಂಪಿಯನ್ ಶರತ್ ಕಮಲ್ ಅವರನ್ನು ಸೋಲಿಸಿ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಗೆಲ್ಲುವ ತನ್ನ ದೀರ್ಘಕಾಲದ ಕನಸನ್ನು ಈಡೇರಿಸಿಕೊಂಡಿದ್ದ ಭಾರತೀಯ ಯುವ ಪ್ಯಾಡ್ಲರ್ ಜಿ ಸತಿಯಾನ್, ಇದೀಗ ದೋಹಾದಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಮುಹಮ್ಮದ್ ರಮೀಜ್ ಅವರನ್ನು 4-0 (11-5, 11-8, 11-9, 11-2) ಸೆಟ್ಗಳಿಂದ ಮಣಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಬಳಿಕ ಈಟಿವಿ ಭಾರತ್ ಜೊತೆ ಮಾತನಾಡಿದ ಸತಿಯಾನ್, ಭಾರತದ ಅತ್ಯುತ್ತಮ ಆಟಗಾರ ಶರತ್ ಕಮಲ್ ಅವರನ್ನು ಸೋಲಿಸಿದ ಬಗ್ಗೆ, ಒಲಿಂಪಿಕ್ ಅರ್ಹತಾ ಪಂದ್ಯಗಳಿಗಾಗಿ ಅವರ ಸಿದ್ಧತೆಗಳು ಹಾಗೂ ವಿವಿಧ ಲೀಗ್‌ಗಳಲ್ಲಿ ಆಡುವುದು ಹೇಗೆ ಎಂಬುದು ಸೇರಿ ಇತ್ಯಾದಿ ವಿಷಯಗಳನ್ನು ಹಂಚಿಕೊಂಡರು.
ಪ್ರಶ್ನೆ : ನೀವು ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದೀರಿ, ಇದರ ಬಗ್ಗೆ ಏನನಿಸುತ್ತದೆ?
ಸತಿಯಾನ್ : ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನ್ನ ಕನಸು ನನಸಾದ ಕ್ಷಣವಾಗಿದೆ. ನಾನು ಚಿಕ್ಕವನಿದ್ದಾಗಿನಿಂದ ಈ ದಿನದ ಕನಸು ಕಂಡಿದ್ದೆ. ಸಣ್ಣವನಿದ್ದಾಗ ಒಂದು ದಿನ ನಾನು ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸುತ್ತೇನೆ ಎಂದು ನನ್ನ ಪೋಷಕರು ಮತ್ತು ಸಂಬಂಧಿಕರಿಗೆ ಹೇಳುತ್ತಿದ್ದೆ. ಇದು ನನಗೆ, ನನ್ನ ಕುಟುಂಬಕ್ಕೆ, ನನ್ನ ತಂಡ ಮತ್ತು ನನ್ನ ತರಬೇತುದಾರರಿಗೆ ಬಹಳ ವಿಶೇಷವಾದ ಸಂದರ್ಭವಾಗಿದೆ. ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಶ್ನೆ: ಕೋವಿಡ್ ನಡುವೆಯೂ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ ಅರ್ಹತಾ ಪಂದ್ಯಕ್ಕೆ ನೀವು ಹೇಗೆ ತಯಾರಿ ಮಾಡಿದ್ದೀರಿ?
ಸತಿಯಾನ್ : ಒಲಿಂಪಿಕ್ಸ್‌ಗೆ ಅರ್ಹತೆ ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಈ ವರ್ಷದ ಎರಡು ಪ್ರಮುಖ ಪಂದ್ಯಾವಳಿಗಳಾಗಿವೆ. ನಾನು ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಪಂದ್ಯ ಪ್ರಾರಂಭವಾಗುವ ಮೊದಲು, ನಾನು ನನ್ನ ಸ್ವಂತ ಹಣ ಖರ್ಚು ಮಾಡಿ ನ್ಯಾಷನಲ್ಸ್ ಮತ್ತು ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಬಳಸಲಿರುವ ಟೇಬಲ್ ಅನ್ನು ಖರೀದಿಸಿದೆ. ಅಲ್ಲಿನ ಹೇಗೆ ಟೇಬಲ್ ಅಳವಡಿಸಿರುತ್ತಾರೋ ಅದೇ ರೀತಿ ನಾನೂ ಅಳವಡಿಸಿಕೊಂಡೆ. ಇದು ನನಗೆ ಹೆಚ್ಚು ಸಹಾಯ ಮಾಡಿತು ಎಂದು ಭಾವಿಸುತ್ತೇನೆ. ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಗೆದ್ದದ್ದು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿತು. ಅದೇ ವೇಗವನ್ನು ನಾನು ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಅಳವಡಿಸಿಕೊಂಡೆ.
ಪ್ರಶ್ನೆ: ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಶರತ್ ಕಮಲ್ ಮತ್ತು ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಮಹಮ್ಮದ್ ರಮೀಜ್ ವಿರುದ್ಧ ಗೆದ್ದ ನಿಮ್ಮ ಅನುಭವವನ್ನು ಹಂಚಿಕೊಳ್ಳಿ.
ಸತಿಯಾನ್ : ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಶರತ್ ಕಮಲ್ ವಿರುದ್ಧ ಗೆದ್ದದ್ದು ನಿಜಕ್ಕೂ ಅದ್ಬುತ. ಕೆಲವೇ ವಾರಗಳ ಹಿಂದೆ ಈ ಗೆಲುವು ಸಾಧಿಸಿದ ಹಿನ್ನೆಲೆ, ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ನನಗೆ ಇದು ನೆರವಾಯಿತು.
ಏಷ್ಯನ್ ಚಾಂಪಿಯನ್ ಮುಹಮ್ಮದ್ ರಮೀಜ್ ಜೊತೆ ಆಡುವಾಗ ನಾನು ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ಆದರೂ, ನಾನು ಅರಾಮವಾಗಿ ಆಡಿದೆ. ಹೀಗಾಗಿ, ಕೊನೆಗೆ 4-0 ಸೆಟ್ಗಳಲ್ಲಿ ಸುಲಭವಾಗಿ ಗೆದ್ದೆ.
ಪ್ರಶ್ನೆ: ನಿಮ್ಮ ರೋಲ್ ಮಾಡೆಲ್ ಯಾರು?
ಸತಿಯಾನ್ : ನಾನು ಟಿಮೊ ಬಾಲ್ ಅಭಿಮಾನಿಯಾಗಿದ್ದೇನೆ. ಜರ್ಮನ್ ಲೀಗ್‌ನಲ್ಲಿ ಅವನ ವಿರುದ್ಧ ಆಡಿದ್ದು ಮತ್ತು ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದು ನನಗೆ ಒಂದು ಅದ್ಬುತ ಕ್ಷಣವಾಗಿದೆ. ಬುಂಡೆಸ್ಲಿಗಾದಲ್ಲಿ ಅವರ ವಿರುದ್ಧ ಆಡಿದಾಗ, ನಾನೇ ಆಶ್ಚರ್ಯಚಕಿತನಾಗಿದ್ದೆ.