ಮುಂಬೈ: ಭಾರತದ ಸ್ಟಾರ್ ಕುಸ್ತಿಪಟು ಗೀತಾ ಪೋಗಟ್ 2021ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಟೇಬಲ್ ಟೆನ್ನಿಸ್ ಆಟಗಾರ ಮುದಿತ್ ದನಿಯವರೊಂದಿಗೆ ಮಾತನಾಡಿದ ಪೋಗಟ್, ಕೋವಿಡ್-19 ಭೀತಿಯಿಂದ ಮುಂದೂಡಲ್ಪಟ್ಟಿರುವ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಒಲಿಂಪಿಕ್ಸ್ ಮುಂದೂಡಲ್ಪಟ್ಟಾಗಿನಿಂದ, ನಾನು ಅದರಲ್ಲಿ ಸ್ಪರ್ಧಿಸಲು ಆಶಿಸುತ್ತಿದ್ದೇನೆ. ಈ ಒಂದು ವರ್ಷ ಒಲಿಂಪಿಕ್ಸ್ಗೆ ತಯಾರಾಗಲು ಮತ್ತು ಅರ್ಹತೆ ಗಿಟ್ಟಿಸಲು ಸಾಕಷ್ಟು ಸಮಯ ಸಿಕ್ಕಂತಾಗಿದೆ ಎಂದು ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಏಕೈಕ ಕುಸ್ತಿಪಟು ಗೀತಾ ಪೋಗಟ್ ತಿಳಿಸಿದ್ದಾರೆ.
ಪ್ರಗ್ನೆನ್ಸಿ ಅವಧಿಯಲ್ಲಿ ನನ್ನ ತೂಕದಲ್ಲಿ ಹೆಚ್ಚಾಗಿದೆ. ಆದ್ದರಿಂದ ನನ್ನ ಫಿಟ್ನೆಸ್ಗೆ ನನ್ನ ಮೊದಲ ಆದ್ಯತೆ. ನಂತರ ಒಲಿಂಪಿಕ್ಸ್ಗೆ ಸಂಬಂಧಿಸಿದಂತೆ ಯಾವುದೇ ಅರ್ಹತಾ ಟೂರ್ನಿ ನಡೆದರೂ ನಾನು ಭಾಗವಹಿಸುವೆ. ಹಾಗೂ ಒಲಿಂಪಿಕ್ಸ್ ಕೂಟದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುವೆ ಎಂದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿರುವ ಗೀತಾ ಭಾರತದ ಕುಸ್ತಿಪಟು ಪವನ್ ಕುಮಾರ್ ಸರೋಹ ಅವರನ್ನು 2016ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರಿಗೆ ಕಳೆದ ಡಿಸೆಂಬರ್ನಲ್ಲಿ ಗಂಡು ಮಗು ಜನಿಸಿದೆ.