ನವದೆಹಲಿ: ಒಡಿಶಾದ ರೂರ್ಕೆಲಾದಲ್ಲಿ ವಿಶ್ವದ ನಾಲ್ಕನೇ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಸಿದ್ಧವಾಗಿದೆ. ಇದರಲ್ಲಿ ಬರುವ ಜನವರಿ 13 ರಿಂದ ಹಾಕಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಜನವರಿ 5ರಂದು ಕ್ರೀಡಾಂಗಣ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ಹಾಕಿಯ ಮೊದಲ ಪಂದ್ಯವು ಜಾರ್ಖಂಡ್ ಮತ್ತು ಒಡಿಶಾದ ಜೂನಿಯರ್ ಪುರುಷರ ತಂಡಗಳ ನಡುವೆ ನಡೆಯಲಿದೆ. ಈ ಕ್ರೀಡಾಂಗಣಕ್ಕೆ ದೇಶದ ಮಹಾನ್ ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗಿದೆ.
ಕ್ರೀಡಾಂಗಣದ ವಿಶೇಷತೆ: ಕ್ರೀಡಾಂಗಣ 15 ಎಕರೆಗಳಷ್ಟು ವಿಸ್ತಾರವಾಗಿದ್ದು, ವಿಶ್ವದ ಮೊದಲ ಪರಿಸರ ಸ್ನೇಹಿ ಹಾಕಿ ಕ್ರೀಡಾಂಗಣವಾಗಿದೆ. ಕ್ರೀಡಾಂಗಣದಲ್ಲಿ 27 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದು. ಕ್ರೀಡಾಂಗಣದ ವಿಶೇಷತೆ ಎಂದರೆ ಇಲ್ಲಿನ ಪ್ರತಿಯೊಂದು ಆಸನದ ರಚನೆಯು ವಿಶ್ವದ ಯಾವುದೇ ಕ್ರೀಡಾಂಗಣಕ್ಕಿಂತ ಪ್ರೇಕ್ಷಕರು ಮೈದಾನಕ್ಕೆ ಹತ್ತಿರವಾಗುವಂತೆ ಇದೆ. ಕ್ರೀಡಾಂಗಣದಲ್ಲಿ ಅಭ್ಯಾಸದ ಪಿಚ್ ಮತ್ತು ಬಟ್ಟೆ ಬದಲಾಯಿಸುವ ಕೋಣೆಗೆ ಸಂಪರ್ಕ ಕಲ್ಪಿಸಲು ಸುರಂಗವನ್ನು ಮಾಡಲಾಗಿದೆ. ಪಿಚ್ ಬಳಿ ಫಿಟ್‌ನೆಸ್ ಸೆಂಟರ್, ರಿಕವರಿ ಸೆಂಟರ್ ಮತ್ತು ಹೈಡ್ರೋಥೆರಪಿ ಪೂಲ್ನ್ನು ನಿರ್ಮಿಸಲಾಗಿದೆ.
ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಎರಡು ಹೋಟೆಲ್‌ಗಳಿದ್ದು, ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ಮತ್ತು ವಿದೇಶದ ಆಟಗಾರರು ಇಲ್ಲಿ ತಂಗಲಿದ್ದಾರೆ. ಕ್ರೀಡಾಂಗಣವು ಭೂಕಂಪ ನಿರೋಧಕವಾಗಿದೆ. ಕ್ರೀಡಾಂಗಣವನ್ನು ಹವಾಮಾನ ಸ್ನೇಹಿಯಾಗಿಡಲು, 250 ಹೆಚ್ಪಿ ಡಕ್ಟಬಲ್ ಎಸಿ ಘಟಕವನ್ನು ಸ್ಥಾಪಿಸಲಾಗಿದೆ. ಸುಮಾರು 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾಂಗಣದ ವಿನ್ಯಾಸವನ್ನು ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರ್‌ಗಳು ಸಿದ್ಧಪಡಿಸಿದ್ದಾರೆ.
ಜನವರಿ 13ರ ರಿಂದ ಹಾಕಿ ವಿಶ್ವಕಪ್: ಭಾರತದಲ್ಲಿ 15ನೇ ಹಾಕಿ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಜನವರಿ 13 ರಿಂದ 29ರವರೆಗೆ ನಡೆಯಲಿರುವ ಈ ಮಹಾನ್ ಹಾಕಿ ಕದನದಲ್ಲಿ ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಆಗಲು ಸೆಣಸಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ. ಬಿ ಗುಂಪಿನಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ. ಸಿ ಗುಂಪಿನಲ್ಲಿ ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲೆಂಡ್ ಮತ್ತು ಡಿ ಗುಂಪಿನಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ಇದೆ.
ವಿಶ್ವಕಪ್ ಹಾಕಿಯ ಮೊದಲ ಪಂದ್ಯ ಭಾರತ ಮತ್ತು ಸ್ಪೇನ್ ನಡುವೆ ಜನವರಿ 13 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ. ಈ ಸ್ಪರ್ಧೆಯಲ್ಲಿ 16 ದೇಶಗಳ ನಡುವೆ ಒಟ್ಟು 44 ಪಂದ್ಯಗಳು ನಡೆಯಲಿವೆ. ಈ ಪೈಕಿ 20 ಪಂದ್ಯಗಳು ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ನೂರ್ ಖಾನ್ನರಿಂದ ವಿಶ್ವಕಪ್ ಪ್ರಸ್ತಾವನೆ: ಪಾಕಿಸ್ತಾನದ ಏರ್ ಮಾರ್ಷಲ್ ನೂರ್ ಖಾನ್ ಅವರ ಮನಸ್ಸಿಗೆ ಹಾಕಿ ವಿಶ್ವಕಪ್ ಆರಂಭಿಸುವ ಯೋಚನೆ ಬಂತು. ಅವರು ವಿಶ್ವ ಹಾಕಿ ನಿಯತಕಾಲಿಕದ ಮೊದಲ ಸಂಪಾದಕ ಪ್ಯಾಟ್ರಿಕ್ ರೌಲಿ ಮೂಲಕ ಎಫ್‌ಐಹೆಚ್‌ಗೆ ಹಾಕಿ ವಿಶ್ವಕಪ್‌ನ ಪರಿಚಯವನ್ನು ಪ್ರಸ್ತಾಪಿಸಿದರು. ಎಫ್‌ಐಹೆಚ್ ಪ್ರಸ್ತಾವನೆಯನ್ನು 26 ಅಕ್ಟೋಬರ್ 1969 ರಂದು ಅನುಮೋದಿಸಿತು. 12 ಏಪ್ರಿಲ್ 1970 ರಂದು ಬ್ರಸೆಲ್ಸ್‌ನಲ್ಲಿ ನಡೆದ ಸಭೆಯಲ್ಲಿ ವಿಶ್ವಕಪ್ ನಡೆಯಲಿದೆ ಎಂದು ಘೋಷಿಸಲಾಯಿತು.
ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಪಾಕಿಸ್ತಾನ: ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ಯಶಸ್ವಿ ತಂಡವಾಗಿದೆ. ಪಾಕಿಸ್ತಾನ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಅಕ್ಟೋಬರ್ 1971 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ತನ್ನ ನೆಲದಲ್ಲಿ ಫೈನಲ್‌ನಲ್ಲಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿತು. ಕೀನ್ಯಾವನ್ನು 2-1 ಅಂತರದಿಂದ ಸೋಲಿಸಿದ ಭಾರತ ಮೂರನೇ ಸ್ಥಾನ ಗಳಿಸಿತು. ಅರ್ಜೆಂಟೀನಾದಲ್ಲಿ ನಡೆದ 1978 ರ ವಿಶ್ವಕಪ್‌ನಲ್ಲಿ, ಪಾಕಿಸ್ತಾನವು ನೆದರ್ಲೆಂಡ್ಸ್ ಅನ್ನು 3-2 ಗೋಲುಗಳಿಂದ ಸೋಲಿಸಿತು. ಆಸ್ಟ್ರೇಲಿಯಾವು ಪಶ್ಚಿಮ ಜರ್ಮನಿಯನ್ನು 4-3 ಅಂತರದಿಂದ ಸೋಲಿಸಿ ಮೂರನೇ ಸ್ಥಾನ ಗಳಿಸಿತು.
1982ರಲ್ಲಿ ಭಾರತದಲ್ಲಿ ಆಯೋಜಿಸಲಾಗಿದ್ದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಜರ್ಮನಿಯನ್ನು 3-1 ಅಂತರದಿಂದ ಸೋಲಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಆಸ್ಟ್ರೇಲಿಯಾದಲ್ಲಿ ನಡೆದ 1994 ರ ವಿಶ್ವಕಪ್‌ನಲ್ಲಿ, ಪಾಕಿಸ್ತಾನವು ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್‌ಲ್ಯಾಂಡ್ಸ್ ಅನ್ನು 4-3 ರಿಂದ ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಆಯಿತು.
ಇದನ್ನೂ ಓದಿ: ಬಿಗ್ ಬ್ಯಾಷ್ ಟಿ20 ಲೀಗ್: ‘ಈ ಕ್ಯಾಚ್ ಔಟೋ, ಅಲ್ವೋ? ನೀವೇ ನೋಡಿ ಹೇಳಿ..