ಒಸ್ಲೊ(ನಾರ್ವೆ): ಇಲ್ಲಿ ನಡೆಯುತ್ತಿರುವ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾರತದ ಕುಸ್ತಿಪಟು ಸರಿತಾ ಮೋರ್ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ವಿಶ್ವಚಾಂಪಿಯನ್ ಲಿಂಡಾ ಮೊರಾಯಿಸ್ ಅವರಿಗೆ ಅಘಾತ ನೀಡಿ, ನಂತರ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮತ್ತು ಯುವ ಕುಸ್ತಿಪಟು ಅನ್ಶು ಮಲಿಕ್ ಕೂಡ ಅಂತಿಮ ನಾಲ್ಕರಘಟ್ಟಕ್ಕೆ ಪ್ರವೇಶ ಪಡೆದಿದ್ದು, ದೇಶದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.
ಏಷ್ಯನ್ ಚಾಂಪಿಯನ್ ಆಗಿರುವ ಸರಿತಾ 59 ಕೆಜಿ ವಿಭಾಗದ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ 2019ರ ವಿಶ್ವ ಚಾಂಪಿಯನ್ ಆಗಿರುವ ಕೆನಡಾ ಕುಸ್ತಿಪಟುವಿನ ವಿರುದ್ಧ ಪ್ರಬಲ ಪೈಪೋಟಿ ನೀಡಿ ಗೆದ್ದು ಬಂದಿದ್ದರು. ನಂತರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿಯ ಸಾಂಡ್ರಾ ಪರುಜೆವ್ಸ್ಕಿ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟರು.
ಸರಿತಾ ಸೆಮಿಫೈನಲ್ಸ್ನಲ್ಲಿ ಯುರೋಪಿಯನ್ ಚಾಂಪಿಯನ್ ಆಗಿರುವ ಬಲ್ಗೇರಿಯಾದ ಬಿಲಿಯಾನಾ ಜಿವ್ಕೋವಾ ದುಡೋವಾ ವಿರುದ್ಧ ಸೆಣಸಾಡಲಿದ್ದಾರೆ. 57ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಅನ್ಶು ಮಲಿಕ್ ಮಂಗೋಲಿಯಾದ ದವಾಚಿಮೆಗ್ ಎರ್ಖೆಂಬಾಯರ್ ವಿರುದ್ಧ 5-1ರಲ್ಲಿ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.
72 ಕೆಜಿ ವಿಭಾಗದಲ್ಲಿ ಟೆಕ್ನಿಕಲ್ ಫಾಲ್ ಮೂಲಕ ಕ್ಸೆನಿಯಾ ಬುರಕೋವಾ ವಿರುದ್ಧ ಗೆದ್ದಿದ್ದ ದಿವ್ಯಾ ಕಕ್ರಾನ್ ನಂತರ ಜಪಾನ್ನ ಅಂಡರ್ 23 ಚಾಂಪಿಯನ್ ಮಸಾಕೊ ಫ್ಯೂರಿಚ್ ವಿರುದ್ಧ ಸೋಲು ಕಂಡರು.
76 ಕೆಜಿ ವಿಭಾಗದಲ್ಲಿ ಕಿರಣ್ ರೆಪೆಶಾಜ್ ಪಂದ್ಯದಲ್ಲಿ ಕಂಚಿನ ಪದಕದ ಪ್ಲೇ ಆಫ್ ತಲುಪಿದ್ದಾರೆ. ಉಳಿದಂತೆ 53 ಕೆಜಿ ವಿಭಾಗದಲ್ಲಿ ರೆಪೆಶಾಜ್ ಸುತ್ತಿನಲ್ಲಿ ಪೂಜಾ ಜಟ್ ಸೋಲು ಕಂಡರೆ, 68 ಕೆಜಿ ವಿಭಾಗದಲ್ಲಿ ರೀತು ಮಲಿಕ್ ಉಕ್ರೇನ್ ಕುಸ್ತಿಪಟು ವಿರುದ್ಧ ಸೋಲು ಕಂಡರು.
ಇದನ್ನು ಓದಿ:ಹಾಕಿ..FIH ವಾರ್ಷಿಕ ಪ್ರಶಸ್ತಿಗಳೆಲ್ಲವನ್ನು ಬಾಚಿಕೊಂಡ ಭಾರತ: ಬೆಲ್ಜಿಯಂ ಅಸಮಾಧಾನ