ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಕುಸ್ತಿಪಟು ವಿನೇಶ್ ಫೋಗಾಟ್ ಅವರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ. ಸತತ ಎರಡನೇ ಬಾರಿಗೆ ಇವರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತಿದೆ.
ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಶಿಫಾರಸುಗಳನ್ನು ಅಂತಿಮಗೊಳಿಸಿ ಕ್ರೀಡಾ ಸಚಿವಾಲಯಕ್ಕೆ ಸೋಮವಾರ ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ. "ಖೇಲ್ ರತ್ನಕ್ಕೆ ಸಂಬಂಧಿಸಿದಂತೆ, ವಿನೇಶ್ ನಮ್ಮ ಏಕೈಕ ಶಿಫಾರಸು" ಎಂದು ಡಬ್ಲ್ಯುಎಫ್‌ಐ ಕಾರ್ಯದರ್ಶಿ ವಿನೋದ್ ತೋಮರ್ ಪ್ರಮುಖ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ವಿನೇಶ್ ಈ ಹಿಂದೆ 2016 ರಲ್ಲಿ ಅರ್ಜುನ ಪ್ರಶಸ್ತಿ ಗೆದ್ದಿದ್ದರು. ವಿನೇಶ್ ಪ್ರಸ್ತುತ 53 ಕೆ.ಜಿ ವಿಭಾಗದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 2019 ರ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ತಮ್ಮ ಮೊದಲ ಪ್ರಯತ್ನದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ನಂತರ ಅವರು 2020ರಲ್ಲಿ ರೋಮ್ ರ‍್ಯಾಂಕಿಂಗ್ ಸರಣಿಯಲ್ಲಿ ಚಿನ್ನ ಗೆದ್ದು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು ಮತ್ತು ನಂತರ ನವದೆಹಲಿಯಲ್ಲಿ ನಡೆದ 2020ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ.
ವಿನೇಶ್ 2016 ರ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ವೃತ್ತಿ ಜೀವನಕ್ಕೆ ಅಪಾಯಕಾರಿಯಾದ ಗಾಯದಿಂದ ಪದಕವನ್ನು ಕಳೆದುಕೊಂಡರು. ಬಳಿಕ ಕುಸ್ತಿಗೆ ಮರಳಿದ ನಂತರ, ವಿನೇಶ್ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ಸೇರಿದಂತೆ 2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾ ಸಚಿವಾಲಯವು ಮೇ 5 ರಂದು ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಕೊರೊನಾ ವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇ-ಮೇಲ್ ಮೂಲಕ ನಾಮಪತ್ರಗಳನ್ನು ಕಳುಹಿಸುವಂತೆ ಸಚಿವಾಲಯ ಕೇಳಿದೆ. ನಾಮಪತ್ರ ಸಲ್ಲಿಸಲು ಸಚಿವಾಲಯ ಜೂನ್ 3 ರ ವರೆಗೆ ಗಡುವು ನೀಡಿದೆ.