ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ಕೆನಡಾ ಓಪನ್ 2023 ವಿಜೇತ ಲಕ್ಷ್ಯ ಸೇನ್ ಇಂದಿನಿಂದ ಆರಂಭವಾಗಲಿರುವ ಯುಎಸ್ ಓಪನ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನವನ್ನು ಮುನ್ನಡೆಸಲಿದ್ದಾರೆ. ಯುಎಸ್ ಓಪನ್ ಸ್ಪರ್ಧೆ ಇಂದಿನಿಂದ (ಜುಲೈ 11) ಜುಲೈ 16ರವರೆಗೆ ನಡೆಯಲಿದೆ. ಇದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ವರ್ಲ್ಡ್ ಟೂರ್ 2023 ಕ್ಯಾಲೆಂಡರ್‌ನ 16ನೇ ಪಂದ್ಯಾವಳಿ ಇದಾಗಿದೆ.
ಇತ್ತೀಚಿನ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೆ ಕುಸಿದಿದ್ದ ಪಿ.ವಿ. ಸಿಂಧು, ಕೆನಡಾ ಓಪನ್‌ನ ಅಂತಿಮ ನಾಲ್ಕು ಹಂತಕ್ಕೆ ಪ್ರವೇಶಿಸಿದ್ದರು. ಅಲ್ಲಿ ಅವರು ಜಪಾನ್‌ನ ನಂಬರ್ ಒನ್ ಅಕಾನೆ ಯಮಗುಚಿ ವಿರುದ್ಧ ಸೋಲು ಕಂಡರು. ಸಿಂಧು ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿರಲಿಲ್ಲ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಈವೆಂಟ್ ಅನ್ನು ಅವರು ಇನ್ನೂ ಗೆದ್ದಿಲ್ಲ. ಕಳೆದ ಮಾರ್ಚ್‌ನಲ್ಲಿ ಸಿಂಧು, ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನ ಫೈನಲ್‌ಗೆ ತಲುಪಿದ್ದರು. ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಎದುರಿಸಲಿದ್ದಾರೆ.
ಗದ್ದೆ ರುತ್ವಿಕಾ ಶಿವಾನಿ ಮುಖ್ಯ ಸುತ್ತಿನಲ್ಲಿ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿದ್ದಾರೆ. ಇಮಾದ್ ಫಾರೂಕಿ ಸಮಿಯಾ ಅವರು ಅರ್ಹತಾ ಹಂತದಿಂದ ತಮ್ಮ ಆಟವನ್ನು ಪ್ರಾರಂಭಿಸಲಿದ್ದಾರೆ. ಲಕ್ಷ್ಯ ಸೇನ್ ಕೆನಡಾ ಓಪನ್‌ನಲ್ಲಿ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ರಿಪಬ್ಲಿಕ್ ಆಫ್ ಚೀನಾದ ಲಿ ಶಿ ಫೆಂಗ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದು ಅಮೋಘ ಫಾರ್ಮ್ನಲ್ಲಿದ್ದಾರೆ. ಟೂರ್ನಿಯಲ್ಲಿ ಲಕ್ಷ್ಯ ಮೂರನೇ ಶ್ರೇಯಾಂಕ ಹೊಂದಿದ್ದು, 32ನೇ ಸುತ್ತಿನಲ್ಲಿ ವಿಶ್ವದ 51ನೇ ಶ್ರೇಯಾಂಕದ ಫಿನ್‌ಲ್ಯಾಂಡ್‌ನ ಕಾಲೆ ಕೊಲ್ಜೊನೆನ್ ಅವರನ್ನು ಎದುರಿಸುವರು.
ಬಿ. ಸಾಯಿ ಪ್ರಣೀತ್ ಕೂಡ ಮುಖ್ಯ ಸುತ್ತಿನಲ್ಲಿ ತಮ್ಮ ಪ್ರಯಾಣ ಶುರು ಮಾಡಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2014ರ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಅವರು ಫ್ರಾನ್ಸ್‌ನ ಲ್ಯೂಕಾಸ್ ಕ್ಲೇರ್‌ಬೌಟ್ ವಿರುದ್ಧ ಅರ್ಹತಾ ಪಂದ್ಯಗಳಲ್ಲಿ ತಮ್ಮ ಪಂದ್ಯ ಆರಂಭಿಸಲಿದ್ದಾರೆ. ಎಸ್. ಶಂಕರ್ ಮುತ್ತುಸ್ವಾಮಿ ಸುಬ್ರಮಣಿಯನ್ ಕೂಡ ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯ ಅನುಪಸ್ಥಿತಿ ಕಾಡಲಿದೆ. ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಅವರು ಪುರುಷರ ಡಬಲ್ಸ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆಯ ಲಿನ್ ಯು ಚಿ ಮತ್ತು ಸು ಲಿ ವೀ ಅವರೊಂದಿಗೆ ಹೋರಾಡಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ರುತಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಜೋಡಿ ಪ್ರಧಾನ ಸುತ್ತಿನಲ್ಲಿ ಆಡಲಿದೆ. ಅಪೇಕ್ಷಾ ನಾಯಕ್ ಮತ್ತು ರಮ್ಯಾ ಚಿಕ್ಕಮೇನಹಳ್ಳಿ ವೆಂಕಟೇಶ್ ಕೂಡ ಮಹಿಳೆಯರ ಡಬಲ್ಸ್ ಸ್ಪರ್ಧೆಯ ಪ್ರದಾನ ಸುತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
US ಓಪನ್ 2023 ಬ್ಯಾಡ್ಮಿಂಟನ್: ಭಾರತೀಯ ತಂಡ
ಪುರುಷರ ಸಿಂಗಲ್ಸ್ - ಮುಖ್ಯ ಡ್ರಾ: ಲಕ್ಷ್ಯ ಸೇನ್, ಬಿ. ಸಾಯಿ ಪ್ರಣೀತ್
ಅರ್ಹತೆ: ಎಸ್. ಶಂಕರ್ ಮುತ್ತುಸ್ವಾಮಿ ಸುಬ್ರಮಣಿಯನ್, ಪರುಪಳ್ಳಿ ಕಶ್ಯಪ್
ಮಹಿಳೆಯರ ಸಿಂಗಲ್ಸ್ - ಮುಖ್ಯ ಡ್ರಾ: ಪಿ.ವಿ. ಸಿಂಧು, ಗದ್ದೆ ರುತ್ವಿಕಾ ಶಿವಾನಿ
ಅರ್ಹತೆ: ಇಮಾದ್ ಫಾರೂಕಿ ಸಮಿಯಾ
ಪುರುಷರ ಡಬಲ್ಸ್- ಮುಖ್ಯ ಡ್ರಾ: ಕೃಷ್ಣ ಪ್ರಸಾದ್ ಗರಗ/ ವಿಷ್ಣುವರ್ಧನ್ ಗೌಡ್ ಪಂಜಾಳ
ಮಹಿಳಾ ಡಬಲ್ಸ್ - ಮುಖ್ಯ ಡ್ರಾ: ಅಪೇಕ್ಷಾ ನಾಯಕ್/ ರಮ್ಯಾ ಚಿಕ್ಮೇನಹಳ್ಳಿ ವೆಂಕಟೇಶ್, ರುತಪರ್ಣ ಪಾಂಡಾ/ ಶ್ವೇತಪರ್ಣ ಪಾಂಡಾ
ಇದನ್ನೂ ಓದಿ: Wimbledon: ಮಾಜಿ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಜಬೇರ್!