ಬ್ಯಾಂಕಾಕ್(ಥಾಯ್ಲೆಂಡ್): ಹಲವು ದಿನಗಳ ಬಳಿಕ ಮತ್ತೆ ಬ್ಯಾಡ್ಮಿಂಟನ್ ಅಂಗಳಕ್ಕೆ ಇಳಿದ ಹಿರಿಯ ಷಟ್ಲರ್, ಸೈನಾ ನೆಹ್ವಾಲ್ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದರು.
ಭಾರತಕ್ಕೆ 2 ಬಾರಿ ಒಲಂಪಿಕ್ಸ್ ಪದಕ ತಂದು ಕೊಟ್ಟಿರುವ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಆಟಗಾರ್ತಿ ವಿರುದ್ಧ ಮೊದಲ ಸೆಟ್ನಲ್ಲಿ 21-11 ರಲ್ಲಿ ಭರ್ಜರಿ ಆರಂಭ ಪಡೆದರು. ಆದರೆ, ಬಳಕ ನಡೆದ 2ನೇ ಸೆಟ್ನಲ್ಲಿ 15-21, ಮೂರನೇ ಸೆಟ್ನಲ್ಲಿ 17-21ರಿಂದ ಹಿನ್ನಡೆ ಹೊಂದುವ ಮೂಲಕ ಪಂದ್ಯವನ್ನು ಕೈಚೆಲ್ಲಿ, ಟೂರ್ನಿಯಿಂದಲೇ ಹೊರನಡೆಯಬೇಕಾಯಿತು.
ಡಬಲ್ಸ್ನಲ್ಲೂ ನಿರಾಸೆ: ಇನ್ನೊಂದೆಡೆ ನಡೆದ ಮಿಶ್ರ ಡಬಲ್ಸ್ನಲ್ಲಿ ರೆಡ್ಡಿ ಬಿ.ಸುಮೀತ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಜಪಾನ್ನ ಯುಕಿ ಕನೆಕೊ ಮತ್ತು ಮಿಸಾಕಿ ಮತ್ಸುಟೊಮೊ ವಿರುದ್ಧ ಸೋಲು ಕಂಡಿದ್ದಾರೆ. ಸುಮೀತ್ ಮತ್ತು ಪೊನ್ನಪ್ಪ ಮೊದಲ ಎರಡೂ ಗೇಮ್ಗಳನ್ನು ತಲಾ 21-17, 21-17 ರಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರನಡೆದರು.
ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಪದಕ ಭರವಸೆ ಮೂಡಿಸಿರುವ ಒಲಂಪಿಕ್ಸ್ ಕಂಚು ಪದಕ ವಿಜೇತೆ ಪಿ.ವಿ. ಸಿಂಧು ಇಂದು ಅಮೆರಿಕದ ಲಾರೆನ್ ಲ್ಯಾಮ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ ಭಾರತದ ಆಕರ್ಷಿ ಕಶ್ಯಪ್ ಕೂಡ ಸೋಲು ಕಂಡರು. 21-13, 21-18 ರಲ್ಲಿ ಆಕರ್ಷಿ ಕಶ್ಯಪ್ ಲಿ ವಿರುದ್ಧ ಪರಾಭವ ಹೊಂದಿದರು. ಈ ಆಟ 33 ನಿಮಿಷಗಳಲ್ಲೇ ಕೊನೆಗೊಂಡಿತು.
ಕಿಡಂಬಿ ಶ್ರೀಕಾಂತ್ಗೆ ಗೆಲುವು: ಥಾಮಸ್ ಕಪ್ ಗೆಲುವಿನ ಸಂಭ್ರಮದಲ್ಲಿರುವ ಭಾರತದ ತಾರಾ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಫ್ರಾನ್ಸ್ನ ಬ್ರೈಸ್ ಲೆವರ್ಡೆಜ್ ವಿರುದ್ಧ ಜಯ ಗಳಿಸುವ ಮೂಲಕ ಥೈಲ್ಯಾಂಡ್ ಓಪನ್ನಲ್ಲಿ ಗೆಲುವಿನ ಖಾತೆ ತೆರೆದಿದ್ದಾರೆ. 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ 18-21, 21-10, 21-16 ರಲ್ಲಿ ಲೆವರ್ಡೆಜ್ರನ್ನು ಸೋಲಿಸಿದರು.
ಓದಿ: ಪ್ಲೇ-ಆಫ್ಗೋಸ್ಕರ ಮುಂದುವರೆದ ಜಿದ್ದಾಜಿದ್ದಿ ಫೈಟ್... 3 ಸ್ಥಾನಕ್ಕಾಗಿ 7 ತಂಡಗಳ ಹೋರಾಟ!