ನವದೆಹಲಿ: ಛತ್ರಸಾಲ್ ಸ್ಟೇಡಿಯಂನಲ್ಲಿ ಯುವ ಕುಸ್ತಿಪಟು ಸಾಗರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಎರಡು ಬಾರಿ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಪದಕ ತಂದುಕೊಟ್ಟಿದ್ದ ಕುಸ್ತಿಪಟು ಸುಶೀಲ್ ಕುಮಾರ್ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಛತ್ರಸಾಲ್ ಸ್ಟೇಡಿಯಂನಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಮೊದಲ ಆರೋಪಿಯಾಗಿದ್ದರು. ಪ್ರಕರಣ ಕುರಿತು ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಪ್ರಮುಖ ಆರೋಪಿ ಸುಶೀಲ್ ಪೊಲೀಸರ ಕೈಗೆ ಸಿಗದೇ ತಲೆ ತಪ್ಪಿಸಿ ತಿರುಗುತ್ತಿದ್ದರು.
ಸದ್ಯದ ವರದಿಯ ಪ್ರಕಾರ 37 ವರ್ಷದ ಸ್ಟಾರ್ ಕುಸ್ತಿಪಟು ಸುಶೀಲ್ ಮತ್ತು ಅವರ ಬಲಗೈ ಬಂಟ ಅಜಯ್ ಕುಮಾರ್ ಪಂಜಾಬ್ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುಶೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಅಲ್ಲದೆ ದೆಹಲಿ ಪೊಲೀಸರು ಸುಶೀಲ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಇನಾಮು ನೀಡುವುದಾಗಿ ಘೋಷಿಸಿದ್ದರು. ಈ ಮಧ್ಯೆ ಕೋರ್ಟ್ ಕೂಡ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಮೇ 4 ರಂದು ನಡೆದಿದ್ದ ಈ ಗಲಾಟೆಯಲ್ಲಿ ಸಾಗರ್ ರಾಣಾ ಕೊಲೆಯಾದರೆ, ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಇವರ ಮೇಲೆ ಸುಶೀಲ್ ಕುಮಾರ್ ಮತ್ತು ಇತರೆ ಕುಸ್ತಿಪಟುಗಳು ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿತ್ತು.
ಇದನ್ನು ಓದಿ: 'ಕುಸ್ತಿಪಟು ಸುಶೀಲ್ ಬಗ್ಗೆ ನಿಖರ ಮಾಹಿತಿ ನೀಡಿದರೆ ಒಂದು ಲಕ್ಷ ರೂಪಾಯಿ'