ಕಾರವಾರ (ಉತ್ತರ ಕರ್ನಾಟಕ): ಜರ್ಮನಿಯ ಬರ್ಲಿನ್‌ನಲ್ಲಿ ಜೂನ್ 17 ರಿಂದ 25 ರವರೆಗೆ ನಡೆಯಲಿರುವ ವಿಶೇಷ ಚೇತನರ ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಗೇಮ್ಸ್ 2023ರ ಭಾರತದ ಟೇಬಲ್ ಟೆನಿಸ್ ತಂಡವನ್ನು ಕುಮಟಾದ ದಯಾ ನಿಲಯ ವಿಶೇಷ ಶಾಲೆಯ ವಿದ್ಯಾರ್ಥಿ ವಿಘ್ನೇಶ್ವರ ನಾಯ್ಕ ಪ್ರತಿನಿಧಿಸಲಿದ್ದಾರೆ.
ಕಳೆದ ಆರು ವರ್ಷಗಳಿಂದ ವಿಶೇಷ ಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ (ರಾಜಸ್ಥಾನ, ದೆಹಲಿ, ಪಂಜಾಬ್, ಗುಜರಾತದಲ್ಲಿ) ಪ್ರಥಮ ಸ್ಥಾನ ಪಡೆದ ಕಾರಣ ವಿಶೇಷ ಚೇತನರಿಗಾಗಿ ನಡೆಯುವ ವಿಶ್ವ ಮಟ್ಟದ ಸ್ಪರ್ಧೆಗೆ ಭಾರತ ತಂಡದ ಸದಸ್ಯನಾಗಿ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಯುಎಇ, ಅಬುದಾಬಿಯಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಎರಡು ಬಂಗಾರದ ಪದಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುವುದು ವಿಶೇಷವಾಗಿದೆ. ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುವ ದಯಾನಿಲಯ ವಿಶೇಷ ಶಾಲೆಯ ಎರಡನೇ ವಿದ್ಯಾರ್ಥಿಯಾಗಿದ್ದಾನೆ.
ಅನಿಲ ನಾಯ್ಕ ಪವರ್ ಲಿಪ್ಟಿಂಗ್ ಕೋಚ್ ಆಗಿ ಆಯ್ಕೆ: ಇದಲ್ಲದೇ ಹೆಲ್ತ್ ಪಾಯಿಂಟ್ ಕುಮಟಾ ಹಾಗೂ ದಯಾನಿಲಯ ವಿಶೇಷ ಶಾಲೆಯಲ್ಲಿ ಪವರ್ ಲಿಪ್ಟಿಂಗ್ ತರಬೇತುದಾರರಾಗಿರುವ ಅನಿಲ ನಾಯ್ಕ ಎಂಬುವವರು ಭಾರತದ ಪವರ್ ಲಿಪ್ಟಿಂಗ್ ಕೋಚ್ ಆಗಿ ಆಯ್ಕೆಯಾಗಿರುತ್ತಾರೆ. ಕಳೆದ ನಾಲ್ಕು ವರ್ಷದಿಂದ ತರಬೇತುದಾರರಾಗಿ ನಡೆದ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಿರುತ್ತಾರೆ.
ದಯಾನಿಲಯ ವಿಶೇಷ ಶಾಲೆ: ದಯಾನಿಲಯ ಶಿಕ್ಷಕ ಸಿರಿಲ್ ಲೊಪಿಸ್ ಕಳೆದ ಹನ್ನೆರಡು ವರ್ಷಗಳಿಂದ ವಿಶೇಷ ಚೇತನ ಮಕ್ಕಳಿಗೆ ಟೇಬಲ್ ಟೆನಿಸ್, ಲಾನ್ ಟೆನಿಸ್, ಜೂಡೋ, ಸ್ವಿಮ್ಮಿಂಗ್, ಸ್ಕೇಟಿಂಗ್ ಹಾಗೂ ವಿವಿಧ ಕ್ರೀಡೆಯಲ್ಲಿ ತರಬೇತಿ ನೀಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿರುತ್ತಾರೆ. ಜರ್ಮನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿಶೇಷ ಆಹ್ವಾನಿತರಾಗಿ ಕ್ರೀಡಾಕೂಟ ನಡೆಸಿಕೊಡಲು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ಶಾಲೆಯ ಮುಖ್ಯಸ್ಥ ಬಾಲಕೃಷ್ಣ ಕೊರಗಾಂವಕರ್ ತಿಳಿಸಿದ್ದಾರೆ. ಅಲ್ಲದೇ ಶಾಲೆಯ ಸಿಬ್ಬಂದಿ ಹಾಗೂ ವಿಶೇಷಚೇತನ ಮಕ್ಕಳು ಶುಭ ಕೋರಿದ್ದಾರೆ.
ಏನಿದು ಸ್ಪೇಷಲ್ ಒಲಿಂಪಿಕ್ ವರ್ಲ್ಡ್ ಗೇಮ್ಸ್ 2023?: 2023 ರ ವಿಶೇಷ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ , ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ ಬರ್ಲಿನ್ 2023 ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ 16 ನೇ ವಿಶೇಷ ಒಲಿಂಪಿಕ್ಸ್ ಆಗಿರುತ್ತದೆ . ಜರ್ಮನಿಯು ವಿಶೇಷ ಒಲಿಂಪಿಕ್ಸ್ ವಿಶ್ವ ಕ್ರೀಡಾಕೂಟವನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ. ವಿಶೇಷ ಒಲಂಪಿಕ್ಸ್ ಜೂನ್ 17 ರಿಂದ 25 ಜೂನ್ ಎಂಟು ದಿನಗಳ ಕಾಲ ನಡೆಯುತ್ತದೆ. 170 ದೇಶಗಳಿಂದ 24 ವಿಭಾಗದ ಕ್ರೀಡೆಯಲ್ಲಿ ಭಾಗವಹಿಸಲು 7000 ಕ್ರೀಡಾಪಟುಗಳು ಬರ್ಲಿನ್ಗೆ ತೆರಳಲಿದ್ದಾರೆ. 3,000 ತರಬೇತುದಾರರು ಮತ್ತು 20,000 ಸ್ವಯಂಸೇವಕರು ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಕೊಹ್ಲಿಗೆ 250 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್: ಈ ಸಾಧನೆ ಮಾಡಿದ ಮೊದಲ ಭಾರತೀಯ!