ಮ್ಯಾಡ್ರಿಡ್ (ಸ್ಪೇನ್): ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಗುರುವಾರ ಇಂಡೋನೇಷ್ಯಾದ ಕುಸುಮಾ ವಾರ್ದಾನಿ ವಿರುದ್ಧ 21-14, 21-16 ರಿಂದ ಜಯ ಸಾಧಿಸಿ, ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ 2023 ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅಂತಿಮ ಎಂಟರ ಘಟ್ಟದಲ್ಲಿ ವಿಶ್ವದ 11ನೇ ಶ್ರೇಯಾಂಕದ ಸಿಂಧು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಎದುರಿಸಲಿದ್ದಾರೆ.
ಈ ತಿಂಗಳ ಸ್ವಿಸ್ ಓಪನ್‌ನ ಮೊದಲ ಸುತ್ತಿನಲ್ಲಿ ಮಲೇಷಿಯಾ, ಭಾರತೀಯ ಮತ್ತು ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಸೋಲನುಭವಿಸಿದ ನಂತರ ಸಿಂಧು ಈ ವರ್ಷ ಟೂರ್ನಾಮೆಂಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದರು. ಸ್ವಿಟ್ಜರ್ಲೆಂಡ್‌ನ ಜೆಂಜಿರಾ ಸ್ಟಾಡೆಲ್‌ಮನ್ ಅವರ ಜೊತೆ 31 ನಿಮಿಷಗಳ ಕಾಲ ಸೆಣಸಾಡಿ ಪಂದ್ಯವನ್ನು 21-10, 21-14 ಸೆಟ್‌ಗಳಿಂದ ಜಯಿಸಿದ್ದರು.
ಇತ್ತೀಚಿನ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನಕ್ಕೆ ಕುಸಿದಿರುವ ಕಿಡಂಬಿ ಶ್ರೀಕಾಂತ್ 21-15, 21-12 ರಲ್ಲಿನಮ್ಮ ದೇಶದವರೇ ಆದ ಬಿ ಸಾಯಿ ಪ್ರಣೀತ್ ಅವರನ್ನು ಸೋಲಿಸಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್ ಷಟ್ಲರ್ ಕೆಂಟಾ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ.
ಮಾಳವಿಕಾ ಬನ್ಸೋಡ್, ಕಿರಣ್ ಜಾರ್ಜ್, ಪ್ರಿಯಾಂಶು ರಾಜಾವತ್, ಸಮೀರ್ ವರ್ಮಾ, ಆಕರ್ಷಿ ಕಶ್ಯಪ್ ಮತ್ತು ಅಶ್ಮಿತಾ ಚಲಿಹಾ ಅವರು ಸ್ಪೇನ್ ಮಾಸ್ಟರ್ಸ್ 2023 ನಿಂದ ಹೊರಗುಳಿದ ಭಾರತದ ಆಟಗಾರಾಗಿದ್ದಾರೆ. ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನೆಸೆನ್ 31 ನಿಮಿಷಗಳ ಪಂದ್ಯದಲ್ಲಿ ಕಿರಣ್ ಜಾರ್ಜ್ ಅವರನ್ನು 21-17, 21-12 ಮತ್ತು ಎಂಟನೇ ಶ್ರೇಯಾಂಕದ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ 21-14, 21-15 ರಿಂದ ಪ್ರಿಯಾಂಶು ರಾಜಾವತ್ ಅವರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಕಾಂತಾ ತ್ಸುನೇಯಮಾ ಅವರು ಸಮೀರ್ ವರ್ಮಾ ಅವರನ್ನು 21-15, 21-14 ಸೆಟ್‌ಗಳಿಂದ ಸೋಲಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 15-21, 15-21ರಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್‌ಗೆ ಸೋತರೆ, ಆಕರ್ಷಿ ಕಶ್ಯಪ್ ಅವರ ಅಭಿಯಾನವು ಜಪಾನ್‌ನ ನಟ್ಸುಕಿ ನಿದೈರಾ ವಿರುದ್ಧ 21-13, 21-8 ರಿಂದ ಸೋತ ನಂತರ ಕೊನೆಗೊಂಡಿತು.
ಸಿಂಧು ರ್‍ಯಾಂಕಿಂಗ್ ಕುಸಿತ: ಮಾರ್ಚ್ 28ರಂದು ಬಿಡುಗಡೆಯಾದ ಮಹಿಳಾ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲ್ಯೂಎಫ್) ಶ್ರೇಯಾಂಕದಲ್ಲಿ ಸಿಂಧು 10ರೊಳಗಿನ ಪಟ್ಟಿಯಿಂದ ಕೆಳಗಿಳಿದಿದ್ದು, ಪ್ರಕಟವಾದ ನೂತನ ಮಹಿಳೆಯರ ಸಿಂಗಲ್ಸ್ ಕ್ರಮಾಂಕದಲ್ಲಿ ಸಿಂಧು 11ನೇ ಸ್ಥಾನದಲ್ಲಿದ್ದಾರೆ. 27 ವರ್ಷದ ಬ್ಯಾಡ್ಮಿಂಟನ್ ತಾರೆಯ ಬಳಿ ಸದ್ಯ 60,448 ಪಾಯಿಂಟ್‌ಗಳಿವೆ. ಒಂದು ಕಾಲದಲ್ಲಿ ಜೀವನ ಶ್ರೇಷ್ಠ 2ನೇ ರ್‍ಯಾಂಕ್‌ನಲ್ಲಿದ್ದ ಸಿಂಧು 2016ರ ನವೆಂಬರ್‌ನಿಂದ ಆರು ವರ್ಷಗಳ ಅಗ್ರ 10ರೊಳಗಿನವರ ಪಟ್ಟಿಯಲ್ಲಿದ್ದರು.
ಇದನ್ನೂ ಓದಿ: ಐಪಿಎಲ್ನಲ್ಲಿ 'ಫ್ಯಾನ್ ಪಾರ್ಕ್' ಮೆರುಗು: ಕರ್ನಾಟಕದಲ್ಲಿ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ