ಬೆಂಗಳೂರು: ನೈರುತ್ಯ ರೈಲ್ವೇ ಬೆಂಗಳೂರಿನ ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಹಾಗು 2012ರ ನಾಗರಿಕ ಸೇವೆಗಳ ಬ್ಯಾಚ್‌ನ ಅಧಿಕಾರಿ ಶ್ರೇಯಸ್ ಹೊಸೂರ್ ಅವರು ಅಪರೂಪದ ಕ್ರೀಡಾ ಸಾಧನೆ ಮಾಡಿದ್ದಾರೆ. ಜುಲೈ 3ರಂದು ಕಜಾಕಿಸ್ತಾನದ ಅಸ್ತಾನಾ ಪ್ರಾಂತ್ಯದಲ್ಲಿ ನಡೆದ ಐರನ್ ಮ್ಯಾನ್ 140.6 ಟ್ರಯಥ್ಲಾನ್ ಅನ್ನು 15 ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಇವರು ಹೊಸ ದಾಖಲೆ ಬರೆದಿದ್ದಾರೆ. ಟ್ರಯಥ್ಲಾನ್ ವಿಶ್ವದ ಅತ್ಯಂತ ಕಠಿಣವಾದ ಕ್ರೀಡಾಕೂಟವಾಗಿದ್ದು, 3.8 ಕಿ.ಮೀ ಈಜು ಸ್ಪರ್ಧೆ, 180 ಕಿ.ಮೀ ಬೈಕ್ ರೈಡ್ ಮತ್ತು 42.2 ಕಿ.ಮೀ ಪೂರ್ಣ ಮ್ಯಾರಥಾನ್ ಓಟ ಒಳಗೊಂಡಿದೆ.
1 ಗಂಟೆ 35 ನಿಮಿಷಗಳಲ್ಲಿ ಪೂರ್ಣ: ಟ್ರಯಥ್ಲಾನ್ ಸಾಧನೆಗೆ ತೃಪ್ತರಾಗದ ಶ್ರೇಯಸ್ ಹೊಸೂರ್ ನಂತರ ಕಜಾಕಿಸ್ತಾನ್‌ನ ಅಲ್ಮಾಟಿ ಪ್ರಾಂತ್ಯದಲ್ಲಿ ಜುಲೈ 8ರಂದು ನಡೆದ ಓಷನ್‌ಮ್ಯಾನ್ ಓಪನ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಓಷನ್ಮ್ಯಾನ್ ಎಂಬುದು ವಿಶ್ವಾದ್ಯಂತ ನಡೆಸಲಾಗುವ ಈಜು ಸ್ಪರ್ಧೆಯಾಗಿದ್ದು, ಕ್ರೀಡಾಪಟುವಿನ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಬಾರಿ ಪ್ರಪಂಚಾದ್ಯಂತ 600ಕ್ಕೂ ಹೆಚ್ಚು ಈಜುಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ 5 ಕಿ.ಮೀಗೆ ನಿಗದಿಯಾದ ಈಜು ಸ್ಪರ್ಧೆಯನ್ನು 1 ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಶ್ರೇಯಸ್ ಹೊಸೂರ್ ಒಂದು ವಾರದ ಅವಧಿಯಲ್ಲಿ ನಡೆದ ಐರನ್‌ಮ್ಯಾನ್ 140.6 ಮತ್ತು ಓಷನ್‌ಮ್ಯಾನ್ ಪ್ರಶಸ್ತಿಗಳನ್ನು ಗೆದ್ದ ಭಾರತದ ಮೊದಲ ನಾಗರಿಕ ಸೇವಾ ಅಧಿಕಾರಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಕಳೆದ ವರ್ಷವೂ ಐರನ್‌ಮ್ಯಾನ್ ಕಿರೀಟ ಧರಿಸಿದ್ದ ಶ್ರೇಯಸ್: ಕಳೆದ ವರ್ಷ ಜೂನ್ 7ರಂದು ಜರ್ಮನಿಯ ಹ್ಯಾಂಬರ್ಗ್ನಲ್ಲಿ ನಡೆದ ವಿಶ್ವದ ಅತ್ಯಂತ ಕಠಿಣ ಏಕದಿನ ಕ್ರೀಡಾಕೂಟವೆಂದು ಪರಿಗಣಿಸಲಾಗುವ 'ಐರನ್‌ಮ್ಯಾನ್' ಟ್ರಯಥ್ಲಾನ್' ಅನ್ನು ಶ್ರೇಯಸ್ ಹೊಸೂರ್ ಪೂರ್ಣಗೊಳಿಸಿದ್ದರು. ಐರನ್‌ಮ್ಯಾನ್ ಗರಿಮೆಯನ್ನು ಹೊತ್ತ ಮೊದಲ ರೈಲ್ವೆ ಅಧಿಕಾರಿ ಮತ್ತು ಪೊಲೀಸ್ ಸೇವೆಗಳನ್ನು ಹೊರತುಪಡಿಸಿ ಈ ಸಾಧನೆಗೈದ ಏಕೈಕ ನಾಗರಿಕ ಸೇವೆಗಳ ಅಧಿಕಾರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ: ದೇಹದಲ್ಲಿ 251 ಹುತಾತ್ಮ ಯೋಧರ ಹೆಸರುಗಳ ಹಚ್ಚೆ! ಹೀಗೊಬ್ಬ ದೇಶಾಭಿಮಾನಿ: ವಿಡಿಯೋ