ಶಹದೋಲ್(ಮಧ್ಯಪ್ರದೇಶ): ದೇಶದಲ್ಲಿ ಕ್ರಿಕೆಟ್ಗಿರುವ ಕ್ರೇಜ್ ಯಾವುದೇ ಕ್ರೀಡೆಗಿಲ್ಲ. ಕ್ರಿಕೆಟ್ ದೇಶದಲ್ಲೇ ನಡೆಯಲಿ, ವಿದೇಶದಲ್ಲೇ ಆಗಲಿ ಅದರ ಖ್ಯಾತಿಗೆ ಭಂಗವಿಲ್ಲ. ಆದರೆ, ಈ ಗ್ರಾಮದ ಯುವಕ, ಯುವತಿಯರಿಗೆ ಕ್ರಿಕೆಟ್ ಗೀಳು ಅಂಟಿಕೊಂಡಿಲ್ಲ. ಬದಲಾಗಿ ಫುಟ್ಬಾಲ್ ಆಟ ಇಲ್ಲಿ ಮನೆ ಮನೆಗೆ ಹರಡಿದೆ. ಅದರಲ್ಲೂ ಹುಡುಗಿಯರೇ ಹೆಚ್ಚಿರುವುದು ಕ್ರೀಡೆಯ ಸೊಬಗು ಹೆಚ್ಚಿಸಿದೆ.
ಹೌದು, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ವಿಚಾರಪುರ ಗ್ರಾಮವೇ ಹುಡುಗಿಯರ ಫುಟ್ಬಾಲ್ನಿಂದಾಗಿ ಹೆಸರು ಪಡೆದಿದೆ. ಗ್ರಾಮದ ಯುವಕ- ಯುವತಿಯರು ಫುಟ್ಬಾಲ್ಗೆ ನೀಡುವಷ್ಟು ಮನ್ನಣೆ ಯಾವ ಕ್ರೀಡೆಗೂ ನೀಡಿಲ್ಲ.
ಪ್ರತಿ ಮನೆಯಲ್ಲಿದ್ದಾರೆ ರಾಷ್ಟ್ರೀಯ ಆಟಗಾರರು: ವಿಚಾರಪುರ ಗ್ರಾಮದ ಪ್ರತಿ ಮನೆಯಲ್ಲಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿಯರಿದ್ದಾರೆ. ಕೆಲ ಆಟಗಾರರು ಒಂದಲ್ಲ ಎರಡಲ್ಲ 10 ಕ್ಕೂ ಹೆಚ್ಚು ಬಾರಿ ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ಹುಡುಗಿಯರು, ಹುಡುಗರು ಸೇರಿ 30 ರಾಷ್ಟ್ರೀಯ ಫುಟ್ಬಾಲ್ ಆಟಗಾರರಿದ್ದಾರೆ. ಅದರಲ್ಲಿ ಹುಡುಗಿಯರದ್ದೇ ಸಂಖ್ಯೆ ಹೆಚ್ಚು ಎಂಬುದು ವಿಶೇಷ. ಬೆಳಗಾದರೆ ಸಾಕು ಎಲ್ಲ ಹುಡುಗಿಯರು ಮೈದಾನದಲ್ಲಿ ಹಾಜರಾಗಿ ಕಾಲ್ಚೆಂಡಿನ ಜೊತೆಗೆ ಕಸರತ್ತು ನಡೆಸುತ್ತಾರೆ.
ಲಕ್ಷ್ಮಿ, ಯಶೋಧಾ ಸಿಂಗ್ರ ಪ್ರಭಾವ: 6 ಬಾರಿ ರಾಷ್ಟ್ರೀಯ ತಂಡದಲ್ಲಿ ಆಡಿರುವ ಯಶೋಧಾ ಸಿಂಗ್, 9 ಬಾರಿ ಆಡಿರುವ ಲಕ್ಷ್ಮಿ ಅವರ ಪ್ರಭಾವ ಇಲ್ಲಿನ ಮಕ್ಕಳ ಮೇಲಿದೆ. ಗ್ರಾಮದ ಮೈದಾನಲ್ಲಿ ಬಾಲಕಿಯರಿಗೆ ಯಶೋಧಾ ಮತ್ತು ಲಕ್ಷ್ಮಿ ಅವರು ಫುಟ್ಬಾಲ್ ಕೋಚಿಂಗ್ ನೀಡುತ್ತಿದ್ದಾರೆ. ಇವರಿಗೆ ಕೇವಲ ಪದಕ, ಪ್ರಮಾಣಪತ್ರ ಬಿಟ್ಟರೆ ಯಾವ ಖ್ಯಾತಿಯೂ ಸಿಕ್ಕಿಲ್ಲ.
ರಾಷ್ಟ್ರೀಯ ಫುಟ್‌ಬಾಲ್ ತಂಡದಲ್ಲಿ ಆಡಿದ್ದರೂ ವೃತ್ತಿಜೀವನ ಮುಂದುವರಿಸಲಾಗಲಿಲ್ಲ. ಈ ಕ್ರೀಡೆ ಕ್ರೇಜ್ ಆಗಿಯೇ ಉಳಿಯಿತು. ಹೀಗಾಗಿ ಮಕ್ಕಳಿಗೆ ದಿನವೂ ಕೋಚಿಂಗ್ ನೀಡುತ್ತಿದ್ದೇವೆ. ಹುಡುಗರಿಗಿಂತಲೂ ಹುಡುಗಿಯರು ಹೆಚ್ಚು ಆಸ್ಥೆ ವಹಿಸಿದ್ದಾರೆ ಎಂಬುದು ಖುಷಿಯ ವಿಚಾರ ಎಂದು ಯಶೋಧಾ ಸಿಂಗ್ ಅವರು ಹೇಳುತ್ತಾರೆ.
ಓದಿ: ಹಾಕಿ ಟೆಸ್ಟ್ನಲ್ಲಿ ಭಾರತಕ್ಕೆ 4-3 ಗೋಲಿಂದ ಜಯ.. 13 ವರ್ಷದ ಬಳಿಕ ಆಸೀಸ್ ವಿರುದ್ಧ ಮೊದಲ ಗೆಲುವು