ಉಲಾನ್ಬತಾರ್( ಮಂಗೋಲಿಯ): ಹಾಲಿ ಚಾಂಪಿಯನ್ ಸರಿತಾ ಮೊರ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾದರೂ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಗುರುವಾರ ಸರಿತಾ ಜೊತೆಗೆ ಸುಷ್ಮಾ ಶೊಕೀನ್ ಕೂಡ ಕಂಚಿನ ಪದಕ ಗೆಲ್ಲುವ ಮೂಲಕ 3ನೇ ದಿನ ಪೋಡಿಯಂ ಏರಿದ್ದಾರೆ.
5 ಅಭ್ಯರ್ಥಿಗಳಿದ್ದ 59 ಕೆಜಿ ವಿಭಾಗದ ಬೌಟ್‌ನಲ್ಲಿ ಸರಿತಾ 2 ಸೋಲುಗಳ ಮೂಲಕ ಟೂರ್ನಿ ಆರಂಭಿಸಿದರೂ ನಂತರದ 2 ಪಂದ್ಯಗಳಲ್ಲಿ ಗೆದ್ದರು. ಸರಿತಾ ಮೊದಲು ಮಂಗೋಲಿಯಾದ ಶೂವ್ಡೊರ್ ಬಾತರ್ಜವ್ ಮತ್ತು ಜಪಾನ್‌ನ ಸಾರಾ ನಟಾಮಿ ವಿರುದ್ಧ ಸೋಲುಕಂಡರೆ, ಉಜ್ಬೆಕಿಸ್ತಾನದ ಡಿಲ್ಫುಜಾ ಐಂಬೆಟೋವಾ ಮತ್ತು ಡಯಾನ ಕಯುಮೋವಾ ವಿರುದ್ಧ 5-2ರಲ್ಲಿ ಗೆಲುವು ಸಾಧಿಸಿದರು.
55 ಕೆಜಿ ವಿಭಾಗದಲ್ಲಿ ಸುಷ್ಮಾ ಕಂಚಿನ ಪದಕ ಗಳಿಸಿದರು. ಈ ಸ್ಪರ್ಧೆಯಲ್ಲೂ ಕೇವಲ ಐವರು ಕುಸ್ತಿಪಟುಗಳಿದ್ದರು. ಮೊದಲ ಪಂದ್ಯದಲ್ಲಿ ಜಪಾನ್‌ನ ಉಮಿ ಇಮಾಯ್ ವಿರುದ್ಧ ತಾಂತ್ರಿಕ ಹಿನ್ನಡೆಯಿಂದಾಗಿ ಸೋತರು. ಆದರೆ ನಂತರದ ಸುತ್ತಿನಲ್ಲಿ ಕಜಕಸ್ತಾನದ ಅಲ್ಟಿನ್ ಶಗಯೆವ ವಿರುದ್ಧ 5-0ಯಿಂದ ಜಯ ಗಳಿಸಿದರು. 3ನೇ ಬೌಟ್‌ನಲ್ಲಿ ಉಜ್ಬೆಕಿಸ್ತಾನದ ಸರ್ಬಿನಾಜ್ ಜಿಯೆನ್‌ಬಯೆವಾ ಅವರನ್ನು ನೆಲಕ್ಕೆ ಕೆಡವಿ ಗೆಲುವು ಸಾಧಿಸಿದರು. ಆದರೆ ಕೊನೆಯ ಬೌಟ್‌ನಲ್ಲಿ ಸ್ಥಳೀಯ ಪ್ರತಿಭೆ ಒಟ್ಕೊನ್ಜಾರ್ಗಲ್ ಗನ್ಬಾತಾರ್ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಇಂದು ಸ್ಪರ್ಧಿಸಿದ್ದ ಇತರೆ ಮೂರು ಕುಸ್ತಿಪಟುಗಳು ಪದಕ ಗೆಲ್ಲುವಲ್ಲಿ ವಿಫಲರಾದರು. 50 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಮನಿಷಾ ಉಜ್ಬೆಕಿಸ್ತಾನದ ಜಾಸ್ಮಿನಾ ಇಮಾಯೆವಾ ಎದುರು ಸೋತರೆ, 68 ಕೆಜಿ ವಿಭಾಗದಲ್ಲಿ ಸೋನಿಕಾ ಹೂಡಾ ಮತ್ತು 76 ಕೆಜಿ ವಿಭಾಗದಲ್ಲಿ ಸುದೇಶ್ ಕುಮಾರಿ ಪದಕ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.
ಭಾರತ ಮೊದಲ ದಿನ 3, 2ನೇ ದಿನ 2 ಪದಕ ಗೆದ್ದಿದೆ. ಇಂದಿನ 2 ಪದಕ ಸೇರಿದಂತೆ ಒಟ್ಟಾರೆ ಟೂರ್ನಿಯಲ್ಲಿ ಏಳು ಕಂಚಿನ ಪದಕ ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಈ ಎರಡು ತಂಡಗಳ ನಡುವಿನ ಕದನ ಭಾರತ-ಪಾಕಿಸ್ತಾನ ಪಂದ್ಯವಿದ್ದಂತೆ: ಹರ್ಭಜನ್ ಸಿಂಗ್