ಮನಿಲ(ಫಿಲಿಫೈನ್ಸ್): ಒಲಿಂಪಿಕ್ಸ್ ಪದಕ ವಿಜೇತರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸುತ್ತಿನಲ್ಲೇ ಕಠಿಣ ಹೋರಾಟ ನಡೆಸಿ ಜಯ ಸಾಧಿಸಿದ್ದಾರೆ. ಆದರೆ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಮತ್ತು ಬಿ ಸಾಯಿ ಪ್ರಣೀತ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಚೈನೀಸ್ ತೈಪೆಯ ಪಾಯ್ ಯು ಪೊ ವಿರುದ್ಧ ಮೊದಲ ಗೇಮ್ ಸೋಲಿನ ಬಳಿಕ ಹೋರಾಟ ಮಾಡಿ ಕೊನೆ 2 ಗೇಮ್ ವಶಪಡಿಸಿಕೊಂಡು 2ನೇ ಸುತ್ತಿಗೆ ಪ್ರವೇಶಿಸಿದರು. ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಭಾರತೀಯ ಶಟ್ಲರ್ 18-21, 27-25, 21-9ರಲ್ಲಿ ಮ್ಯಾರತಾನ್ ಪಂದ್ಯದಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದರು. ಈ ಪಂದ್ಯ ಒಂದು ಗಂಟೆ 17 ನಿಮಿಷಗಳ ಕಾಲ ನಡೆಯಿತು.
ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಅದ ಸಿಮ್ ಯುಜಿನ್ ವಿರುದ್ಧ 21-15,17-21,21-13ರ ಅಂತರದಿಂದ ಗೆಲುವು ಸಾಧಿಸಿದರು. ಸಿಂಧು ಮುಂದಿನ ಪಂದ್ಯದಲ್ಲಿ ಸಿಂಗಪುರ್ ಆಟಗಾರ್ತಿ ಯು ಯಾನ್ ಜಸ್ಲಾಯನ್ ಹುಯಿ ವಿರುದ್ಧ, ಸೈನಾ ಚೀನಾದ ಝಿ ಯಿ ವಾಂಗ್ ವಿರುದ್ದ ಕಣಕ್ಕಿಳಿಯಲಿದ್ದಾರೆ.
ಇಂದು ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದ 17 ವರ್ಷದ ಮಾಳವಿಕ ಬನ್ಸೂದ್ ರೋಚಕ ಪಂದ್ಯದಲ್ಲಿ ಸಿಂಗಾಪುರ್ನ ಯು ಜಿಯಾ ಮಿನ್ ವಿರುದ್ಧ ಸೋಲು ಕಂಡರು. ಅವರು 9-21, 21-17, 26-24ರಲ್ಲಿ ಕಠಿಣ ಹೋರಾಟ ನಡೆಸಿ ಸೋಲು ಕಂಡರು.
ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ,ಮಲೇಷ್ಯಾದ ಜುಂ ಯಂಗ್ ವಿರುದ್ಧ 22-20,21-15ರ ನೇರ ಗೇಮ್ಗಳಲ್ಲಿ ಗೆದ್ದು ದ್ವಿತೀಯ ಸುತ್ತು ಪ್ರವೇಶಿಸಿದರು. ಅವರು 2ನೇ ಸುತ್ತಿನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಆದರೆ 5ನೇ ಶ್ರೇಯಾಂಕಿತ ಲಕ್ಷ್ಯ ಸೇನ್ 21-12, 10-21, 19-21ರಲ್ಲಿ ಚೀನಾದ ಶ್ರೇಯಾಂಕ ರಹಿತ ಲಿ ಶಿ ಫೆಂಗ್ ವಿರುದ್ಧ, 19ನೇ ಶ್ರೇಯಾಂಕದ ಸಾಯಿ ಪ್ರಣೀತ್ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ 17-21, 13-21ರಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು.
ಇದನ್ನೂ ಓದಿ:IPL: ಕೋಟಿಗಟ್ಟಲೆ ಹಣ ಪಡೆದು ಕಳಪೆ ಪ್ರದರ್ಶನ ತೋರುತ್ತಿರುವ ಆಟಗಾರರು ಇವರೇ ನೋಡಿ..