ಒಸ್ಲೊ (ನಾರ್ವೆ) : ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ಕುಸ್ತಿಪಟು ರೋಹಿತ್ 65 ಕೆಜಿ ವಿಭಾಗದಲ್ಲಿ ಟರ್ಕಿ ಕುಸ್ತಿಪಟು ವಿರುದ್ಧ ಗೆಲುವು ಸಾಧಿಸಿ ಮೆಡಲ್ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪಿಂಕಿ 55 ಕೆಜಿ ವಿಭಾಗದಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದರೂ ರೆಪ್ಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದ ರೋಹಿತ್ ಈ ಸುತ್ತಿನಲ್ಲೂ ಸೆಲಹಟಿನ್ ಕಿಲಿಕ್ಸಲ್ಲಯನ್ ವಿರುದ್ಧ ಡಿಫೆಂಡಿಂಗ್ಗೆ ಹೆಚ್ಚು ಮೊರೆ ಹೋಗಿ 1-2ರಲ್ಲಿ ಹಿನ್ನಡೆಗೊಳಗಾಗಿದ್ದರು. ಆದರೆ, ಮೊದಲ ಅವಧಿಯ ಕೊನೆಯಲ್ಲಿ ಲೆಗ್ ಅಟ್ಯಾಕ್ ಮೂಲಕ ಸತತ 4 ಅಂಕಗಳಿಸಿ 5-2ರಲ್ಲಿ ಮುನ್ನಡೆ ಸಾಧಿಸಿದರು.
ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿದ ಬಳಿಕೆ 2ನೇ ಅವಧಿಯಲ್ಲಿ ತಮ್ಮ ಆಟವನ್ನು ಬದಲಾಯಿಸಿಕೊಂಡು ಚಲನೆಗಳಿಗೆ ಹೆಚ್ಚು ಹೊತ್ತು ಕೊಟ್ಟು ಸಮಯವನ್ನು ವ್ಯರ್ಥ ಮಾಡಿಸಿ ಗೆಲುವು ಸಾಧಿಸಿದರು. ಕಂಚಿನ ಪದಕದ ಸುತ್ತಿನಲ್ಲಿ ರೋಹಿತ್ ಮಂಗೋಲಿಯಾದ ತುಮುರ್ ಒಚಿರ್ ವಿರುದ್ಧ ಸೆಣಸಾಡಲಿದ್ದಾರೆ.
ಪುರುಷರ ಅರ್ಹತಾ ಪಂದ್ಯಗಳಲ್ಲಿ ಸತ್ಯವರ್ತ್ ಕಡಿಯಾನ್(97) ಕೋರಿಯಾದ ಮಿನ್ವೋನ್ 6-6ರಲ್ಲಿ ಸಮಬಲ ಸಾದಿಸಿದ್ದರು. ಆದರೆ, ಕೊರಿಯನ್ ಕುಸ್ತಿಪಟು 2 ಅಂಕವನ್ನು ಒಟ್ಟಿಗೆ ಪಡೆದಿದ್ದರಿಂದ ವಿಜೇತನೆಂದು ಘೋಷಿಸಲಾಯಿತು. ಕಡಿಯಾನ್ ಎಲ್ಲಾ 6 ಅಂಕಗಳನ್ನು ತಳ್ಳುವ ಮೂಲಕ ಪಡೆದಿದ್ದರು. ಮತ್ತೊಬ್ಬ ಕುಸ್ತಿಪಟು ಸುಶೀಲ್(70) ಜಾರ್ಜಿಯಾದ ಜುರಾಬಿ ಯಾಕೋಬಿಶ್ವಿಲಿ ವಿರುದ್ಧ 1-6ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು.
ಮಹಿಳೆಯರ 55 ಕೆಜಿ ವಿಭಾಗದಲ್ಲಿ ಪಿಂಕಿ ಕ್ವಾಲಿಫಿಕೇಷನ್ ಸುತ್ತಿನಲ್ಲಿ 5-0ಯಲ್ಲಿ ಕೊರಿಯಾದ ಕಿಮ್ ಸೊಯೋನ್ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ಅವರು ಸೆಮಿಫೈನಲ್ಸ್ನಲ್ಲಿ ಕಜಕಸ್ಥಾನದ ಆಯಿಷಾ ಉಲಿಶನ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಂಗೀತ ಫೋಗಟ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ 2-5ರಲ್ಲಿ ಬ್ರೆಜಿಲ್ನ ಲೈಸ್‌ನನ್ಸ್ ಡಿ ಒಲಿವೇರಾ ವಿರುದ್ಧ ಸೋಲು ಕಂಡರು.