ನವದೆಹಲಿ : ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಹಾಜರಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಗುರುವಾರ ಹೇಳಿದೆ.
ಜೂನ್ 15, 2020 ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿತ್ತು. ಘರ್ಷಣೆಯಲ್ಲಿ ತೊಡಗಿದ್ದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ರೆಜಿಮೆಂಟ್ ಕಮಾಂಡರ್ ಒಬ್ಬನನ್ನು ಬೀಜಿಂಗ್‌ನಲ್ಲಿ ನಡೆಯುತ್ತಿರುವ 2022ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಕ್ರೀಡಾ ಜ್ಯೋತಿಯನ್ನು ಹೊತ್ತೊಯ್ಯಲು ಚೀನಾ ಆಯ್ಕೆ ಮಾಡಿದೆ. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.
ಗಲ್ವಾನ್ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೈನಿಕನೊಬ್ಬನನ್ನು ಒಲಿಂಪಿಕ್ಸ್ ಜ್ಯೋತಿ ಹಿಡಿಯಲು ಬಳಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ವಿದೇಶಾಂಗ ಸಚಿವಾಲಯ ಚಳಿಗಾಲದ ಒಲಿಂಪಿಕ್ಸ್‌ನ ಯಾವುದೇ ಕಾರ್ಯಕ್ರಮದಲ್ಲಿ ಯಾವುದೇ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸುವುದಿಲ್ಲಎಂದು ಹೇಳಿಕೆ ಬಿಡುಗಡೆ ಮಾಡಿದೆ.
"ಒಲಿಂಪಿಕ್ಸ್‌ನಂತಹ ದೊಡ್ಡ ಕ್ರೀಡಾಕೂಟವನ್ನು ಚೀನಾ ರಾಜಕೀಯಗೊಳಿಸಲು ಬಳಸಿಕೊಂಡಿರುವುದು ನಿಜಕ್ಕೂ ವಿಷಾದನೀಯ. 2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬೀಜಿಂಗ್ ಒಲಿಂಪಿಕ್ ಜ್ಯೋತಿಯ ರಿಲೇ ಆರಂಭ: ಮೂರು ದಿನಕ್ಕೆ ಸೀಮಿತ