ದೋಹಾ(ಕತಾರ್): ವಿಶ್ವದ ಶ್ರೀಮಂತ ಆಟವಾದ ಫಿಫಾ ವಿಶ್ವಕಪ್ ಆಯೋಜಿಸಿರುವ ಮುಸ್ಲಿಂ ರಾಷ್ಟ್ರ ಕತಾರ್ನಲ್ಲಿ ಪಂದ್ಯ ವೀಕ್ಷಿಸಲು ಬರುವ ವಿದೇಶಿ ಅಭಿಮಾನಿಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಿದೆ. ಅದರಲ್ಲೂ ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಿದೆ.
ಕತಾರ್ ಪ್ರವಾಸೋದ್ಯಮ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಕ್ಕೆ ಬರುವ ಫುಟ್ಬಾಲ್ ವಿದೇಶಿ ಅಭಿಮಾನಿಗಳು ಸ್ಥಳೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಬಟ್ಟೆಗಳನ್ನು ಧರಿಸುವಂತೆ ಕೇಳಿಕೊಂಡಿದೆ. ಇಲ್ಲಿನ ವಸ್ತ್ರಸಂಹಿತೆ ಕಡ್ಡಾಯವಾಗಿದೆ. ಪುರುಷರು ಮತ್ತು ಮಹಿಳೆಯರು ಸಾರ್ವಜನಿಕವಾಗಿ ಅಂಗಪ್ರದರ್ಶನ ಮಾಡುವ ಬಟ್ಟೆಗಳನ್ನು ಧರಿಸುವಂತಿಲ್ಲ. ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಕಾಣದಂತೆ ಧಿರಿಸು ಧರಿಸಿ ಎಂದು ಸೂಚಿಸಿದೆ. ಈ ನಿಯಮವನ್ನು ಕತಾರ್ ಪ್ರವಾಸೋದ್ಯಮದ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.
ಕುಡಿಯುವುದು, ಮಾದಕವಸ್ತು ಸೇವನೆ, ಲೈಂಗಿಕ ಚಟುವಟಿಕೆ ಮತ್ತು ಉಡುಗೆಗಳ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ದೇಶದ ಕಾನೂನು ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ಅಭಿಮಾನಿಗಳು ಗೌರವಿಸಬೇಕು. ಪ್ರಯಾಣಕ್ಕೂ ಮೊದಲು ಈ ಎಲ್ಲಾ ನಿರ್ಬಂಧಗಳಿಗೆ ಒಳಪಡಬೇಕು ಎಂಬುದನ್ನು ಪರಿಶೀಲಿಸಿ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಫಿಪಾ ವಿಶ್ವಕಪ್ ನವೆಂಬರ್ 20 ರಂದು ಶುರುವಾಗಲಿದ್ದು, ಡಿಸೆಂಬರ್ 18 ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಅತಿಥೇಯ ಕತಾರ್ ಸೆಣಸಾಡಲಿವೆ.
ಓದಿ: ಕ್ರಿಸ್ಟಿಯನ್ ರೊನಾಲ್ಡೊಗೆ ಹೊಟ್ಟೆನೋವು: ನೈಜೀರಿಯಾ ಎದುರಿನ ಅಭ್ಯಾಸ ಪಂದ್ಯದಿಂದ ಔಟ್