ನವದೆಹಲಿ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ( Tokyo Olympics) ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಆಟಗಾರರಲ್ಲಿ ಒಬ್ಬರಾಗಿರುವ ಹಿರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು (P.V Sindhu) ಪೋರ್ಚುಗೀಸ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ರೊನಾಲ್ಡೊ ಅವರ ಕೌಶಲ್ಯ ಮತ್ತು ಆಟದ ತಂತ್ರ ಅದ್ಭುತವಾಗಿದೆ ಎಂದು ಸಿಂಧು ಹೇಳಿದ್ದಾರೆ.
ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ, ಸಿಂಧು ತನ್ನ ನೆಚ್ಚಿ ಕ್ರೀಡಾಪಟುಗಳ ವಿವಿಧ ಕ್ರೀಡೆಗಳನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಸಿಂಧು ಅವರ ನೆಚ್ಚಿನ ಆಟಗಾರರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಒಬ್ಬರು. ರೊನಾಲ್ಡೊ ಇತ್ತೀಚೆಗೆ ಮುಕ್ತಾಯಗೊಂಡ ಯೂರೋ ಕಪ್ - 20 ರಲ್ಲಿ ಅತೀ ಹೆಚ್ಚು ಗೋಲ್ ಹೊಡೆಯುವ ಮೂಲಕ 'ಗೋಲ್ಡನ್ ಶೂ' (Golden Shoe) ತನ್ನದಾಗಿಸಿಕೊಂಡಿದ್ದಾರೆ.
ರೊನಾಲ್ಡೋ ಪ್ರಸಿದ್ಧ ಫುಟ್ಬಾಲ್ ತಾರೆಗಳಲ್ಲಿ ಒಬ್ಬರು. ಇತ್ತೀಚೆಗೆ ಇಟಾಲಿಯನ್ ದೇಶಿಯ ಲೀಗ್ನಲ್ಲಿ 29 ಗೋಲ್ಗಳನ್ನು ಗಳಿಸಿದಕ್ಕಾಗಿ ರೊನಾಲ್ಡೋ ಪ್ರತಿಷ್ಠಿತ ಕ್ಯಾಪೋಕನ್ನೋನಿಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಟೋಕಿಯೋ ಹಾರುವ ಮೊದಲು ಒಲಿಂಪಿಕ್ಸ್ ಡಾಟ್ ಕಾಮ್ ಜೊತೆ ಮಾತನಾಡಿದ ಪಿ.ವಿ ಸಿಂಧು, ರೊನಾಲ್ಡೋ ಅವರನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ. ಅವರು ಆಡುವ ರೀತಿ, ಅವರ ಆಟದ ತಂತ್ರ ಮತ್ತು ಕೌಶಲ್ಯ ಅದ್ಬುತವಾದದ್ದು ಎಂದಿದ್ದಾರೆ.
ಓದಿ : Tokyo Olympics: ಭಾರತೀಯ ಬ್ಯಾಡ್ಮಿಂಟನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು..
ಸಿಂಧು ಫುಟ್ಬಾಲ್ ಮಾತ್ರವಲ್ಲದೇ, ತನ್ನ ಬಿಡುವಿನ ವೇಳೆಯಲ್ಲಿ ಟೆನಿಸ್ ಕೂಡ ವೀಕ್ಷಿಸುತ್ತಾರೆ. ಟೆನಿಸ್ ಆಟಗಾರರಾದ ಸೆರೆನಾ ವಿಲಿಯಮ್ಸ್ (Serena Williams) ಮತ್ತು ರೋಜರ್ ಫೆಡರರ್ (Roger Federer) ಅವರ ಆಟಗಳನ್ನು ನೋಡುವುದುನ್ನು ಸಿಂಧು ತಪ್ಪಿಸುವುದಿಲ್ಲ. ಎರಡೂ ಟೆನಿಸ್ ದಂತ ಕಥೆಗಳು ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ ಟೆನಿಸ್ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಒಂದು ಮಗುವಿನ ತಾಯಿಯಾಗಿದ್ದರೂ ಆಟದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸೆರೆನಾ ತೋರಿಸಿ ಕೊಟ್ಟಿದ್ದಾರೆ. ಸೆರೆನಾ ಒಬ್ಬಳು ಧೈರ್ಯವಂತ ಮಹಿಳೆಯಾದರೆ, ಫೆಡರರ್ ಇನ್ನೊಂದು ದಂತಕಥೆ ಎಂದು ಸಿಂಧು ಇಬ್ಬರು ಟೆನ್ನಿಸ್ ಆಟಗಾರರನ್ನು ಹೊಗಳಿದ್ದಾರೆ.
ಇದೇ ಜುಲೈ ಜುಲೈ 25 ರಂದು ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದ ಕೋರ್ಟ್ 2 ರಲ್ಲಿ ಇಸ್ರೇಲ್ನ ಪೋಲಿಕಾರ್ಪೋವಾ ಕ್ಸೆನಿಯಾ ವಿರುದ್ಧ ಒಲಿಂಪಿಕ್ ಹೋರಾಟವನ್ನು ಪ್ರಾರಭಿಸಲಿದ್ದಾರೆ.