ಮಿಯಾಮಿ: ಕಳೆದ ಕೆಲ ವಾರಗಳ ಹಿಂದೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಇದೀಗ ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಇಂದು ನಡೆದ ತಮ್ಮ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಲೆವೊನ್ ಆರೊನಿಯನ್ ವಿರುದ್ಧ 3-1 ಅಂತರದ ಗೆಲುವು ದಾಖಲು ಮಾಡಿದ್ದಾರೆ.
ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳ ಬಳಿಕ 12 ಪಾಯಿಂಟ್ ಗಳಿಕೆ ಮಾಡಿರುವ ಪ್ರಗ್ನಾನಂದ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಜೊತೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ಚೆಸ್ ಆಟಗಾರರು ಭಾಗಿಯಾಗಿದ್ದು, ಇನ್ನೂ ಮೂರು ಸುತ್ತು ಬಾಕಿ ಉಳಿದಿವೆ.
ಇದನ್ನೂ ಓದಿ: ನಾರ್ವೆ ಚೆಸ್ ಚಾಂಪಿಯನ್ಶಿಪ್: ಜೂ. ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದಗೆ ಪ್ರಶಸ್ತಿ
ನಿನ್ನೆ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರಗ್ನಾನಂದ್ ಹ್ಯಾನ್ಸ್ ನೀಮನ್ ವಿರುದ್ಧ 2.5-1.5 ಅಂತರದ ಗೆಲುವು ದಾಖಲು ಮಾಡಿದ್ದರು. 17 ವರ್ಷದ ಭಾರತದ ಚೆಸ್ ಆಟಗಾರ ಪ್ರಗ್ನಾನಂದ್ ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ಅದ್ಭುತ ಆಟವಾಡಿ ಗೆಲುವು ದಾಖಲು ಮಾಡಿದ್ದು, ನಾಲ್ಕನೇ ಗೇಮ್ನಲ್ಲಿ ಜಯ ಸಾಧಿಸಿದ್ದಾರೆ.ಎಫ್ಟಿಎಕ್ಸ್ ಕ್ರಿಪ್ಟೋ ಕಪ್ ಚೆಸ್ ಟೂರ್ನಿ ಪ್ರತಿ ಪಂದ್ಯದ ಗೆಲುವಿಗೆ USD 7,500 ಡಾಲರ್ ಹಣ ಸಿಗಲಿದೆ.