ನವದೆಹಲಿ: ಭಾರತ ಮತ್ತು ಚೀನಾದ ನಡುವೆ ಗಡಿ ಸಂಬಂಧ ರಾಜತಾಂತ್ರಿಕ ಸಂಘರ್ಷ ಇದೆ. ಆದರೆ, ಈ ವಿವಾದವನ್ನು ಚೀನಾ ಪ್ರಸ್ತುತ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಆಡಬೇಕಾದ ಆಟಗಾರರ ಮೇಲೆ ಎಳೆದು ತಂದಿರುವುದು ಚರ್ಚೆಗೆ ಕಾರಣವಾಗಿದೆ. ಮಿನಿ ಒಲಂಪಿಕ್ಸ್ ಎಂದೇ ಕರೆಸಿಕೊಳ್ಳುವ ಏಷ್ಯನ್ ಗೇಮ್ಸ್ 2023 ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿದೆ. ಈ ಕ್ರೀಡಾಕೂಟಕ್ಕೆ ಭಾರತದ ಅರುಣಾಚಲ ಪ್ರದೇಶದ ಮೂವರು ವುಶು ಆಟಗಾರರ ಮಾನ್ಯತೆ ಕಾರ್ಡ್ ನಿರಾಕರಿಸಲಾಯಿತು. ಇದರಿಂದ ಮೂವರು ಆಟಗಾರರು ಚೀನಾಕ್ಕೆ ಪ್ರಯಾಣ ಬೆಳಸಲು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜಕೀಯ ಮತ್ತು ಕ್ರೀಡೆಯನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಏಷ್ಯಾ ಒಲಿಂಪಿಕ್ ಸಮಿತಿ (ಒಸಿಎ) ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಹೇಳಿದ್ದಾರೆ. "ರಾಜಕೀಯ ಎಂದರೆ ರಾಜಕೀಯ ಮತ್ತು ಕ್ರೀಡೆ ಎಂದರೆ ಕ್ರೀಡೆ. ಅವರೆಡನ್ನೂ ಮಿಶ್ರಣ ಮಾಡಬಾರದು. ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು, ನಾವು ಪರಸ್ಪರ ಸ್ನೇಹ ಮತ್ತು ಪ್ರೀತಿಯನ್ನು ಉತ್ತೇಜಿಸಲು ಕ್ರೀಡೆ ಮಹತ್ವದ ಪಾತ್ರವಹಿಸುತ್ತದೆ" ಎಂದು ರಣಧೀರ್ ಸಿಂಗ್ ಚೀನಾದ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಮೂವರು ವುಶು ಆಟಗಾರರಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜಕ ಸಮಿತಿಯಿಂದ ತಮ್ಮ ಮಾನ್ಯತೆ ಕಾರ್ಡ್‌ಗಳನ್ನು ಪಡೆದಿದ್ದರು. ಆದರೆ, ಅದನ್ನು ಡೌನ್ಲೋಡ್ ಮಾಡಲು ಆಗಿರಲಿಲ್ಲ. ಹೀಗಾಗಿ ಅವರ ಪ್ರಯಾಣವನ್ನು ನಿರಾಕರಿಸಲಾಗಿತ್ತು.
ಚೀನಾದ ಅಧಿಕಾರಿಗಳು ಹ್ಯಾಂಗ್‌ಝೌನಲ್ಲಿ 19 ನೇ ಏಷ್ಯನ್ ಗೇಮ್ಸ್‌ಗೆ ಮಾನ್ಯತೆ ಮತ್ತು ಪ್ರವೇಶವನ್ನು ನಿರಾಕರಿಸುವ ಮೂಲಕ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾ ಪಟುಗಳ ವಿರುದ್ಧ ಉದ್ದೇಶಪೂರ್ವಕ ಮತ್ತು ಪೂರ್ವಭಾವಿ ರೀತಿಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರವು ತಿಳಿದು ಕೊಂಡಿದೆ. ಮೂವರು ಆಟಗಾರರು ತಮ್ಮ ಮಾನ್ಯತೆ ಕಾರ್ಡ್‌ಗಳನ್ನು ಪಡೆಯದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದರು.
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವಾಗಲೂ ಭಾರತದ ಭಾಗವಾಗಿಯೇ ಉಳಿಯುತ್ತದೆ ಎಂದು ಸ್ಪಷ್ಟ ಸಂದೇಶವನ್ನು ಚೀನಾಕ್ಕೆ ಭಾರತ ರವಾನಿಸುವುದರ ಜೊತೆಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಭಟನೆಯ ಸಂಕೇತವಾಗಿ ಕ್ರೀಡಾಕೂಟಕ್ಕಾಗಿ ಇದ್ದ ತಮ್ಮ ನಿಗದಿತ ಚೀನಾ ಭೇಟಿಯನ್ನು ರದ್ದು ಮಾಡಿದ್ದರು.
"ಇದು ರಾಜಕೀಯಕ್ಕೆ ಸಮಯವಲ್ಲ. 15 ದಿನಗಳು ಅಥವಾ ಒಂದು ತಿಂಗಳು ರಾಜಕೀಯವನ್ನು ದೂರವಿಡಬಹುದು. ಕ್ರೀಡಾಕೂಟದಲ್ಲಿ ಭಾಗವಹಿಸಿ ಆನಂದಿಸಬಹುದು" ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚೀನಾ ಇತ್ತಿಚೆಗೆ ಅರುಣಾಚಲ ಪ್ರದೇಶವನ್ನು ತಾನು ದಕ್ಷಿಣ ಟಿಬೆಟ್ ಪ್ರದೇಶ ಎಂದು ಕರೆಯುವ ಮೂಲಕ ಖ್ಯಾತೆ ತೆಗೆದಿತ್ತು.
ಒಂದೆರಡು ತಿಂಗಳ ಹಿಂದೆ, ಅರುಣಾಚಲ ಪ್ರದೇಶದ ಮೂವರು ಆಟಗಾರರಿಗೆ ಚೆಂಗ್ಡುವಿನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟಕ್ಕಾಗಿ ಚೀನಾ ರಾಯಭಾರ ಕಚೇರಿಯಿಂದ ಸ್ಟೇಪಲ್ಡ್ ವೀಸಾಗಳನ್ನು ನೀಡಲಾಯಿತು. ಇದರ ನಂತರ, ಸಂಪೂರ್ಣ 12 ಸದಸ್ಯರ ಭಾರತೀಯ ವುಶು ತಂಡವು ಪ್ರವಾಸವನ್ನು ರದ್ದುಗೊಳಿಸಿತು.
ಏನಿದು ಸ್ಟೇಪಲ್ಡ್ ವೀಸಾ?: ಸ್ಟೇಪಲ್ಡ್ ವೀಸಾ ಎನ್ನುವುದು ಸ್ಟೇಪಲ್ಸ್ ಅಥವಾ ಪಿನ್‌ನೊಂದಿಗೆ ಪಾಸ್‌ಪೋರ್ಟ್‌ಗೆ ಲಗತ್ತಿಸಲಾದ ಕಾಗದವಾಗಿದೆ. ಪಾಸ್‌ಪೋರ್ಟ್‌ನಲ್ಲಿ ನೇರವಾಗಿ ಅಂಟಿಸಲಾದ ಮತ್ತು ಮುದ್ರೆಯೊತ್ತಲಾದ ಸಾಮಾನ್ಯ ವೀಸಾಗಳಿಗಿಂತ ಭಿನ್ನವಾಗಿ, ಸ್ಟೇಪಲ್ಡ್ ವೀಸಾಗಳು ಡಿಟ್ಯಾಚೇಬಲ್ ಆಗಿರುತ್ತವೆ. ಸ್ಟೇಪಲ್ಡ್ ವೀಸಾಗಳ ವಿತರಣೆಯು ಅರುಣಾಚಲ ಪ್ರದೇಶದ ಕುರಿತು ಭಾರತದೊಂದಿಗೆ ಚೀನಾದ ನಡೆಯುತ್ತಿರುವ ಪ್ರಾದೇಶಿಕ ವಿವಾದಗಳ ಭಾಗವಾಗಿದೆ. ಅಂತಹ ವೀಸಾಗಳು ಮಾನ್ಯ ದಾಖಲೆಗಳು ಎಂದು ಚೀನಾ ಹೇಳಿಕೊಂಡಿದೆ. ಆದರೆ, ಭಾರತವು ಈ ಸ್ಥಾನವನ್ನು ಸ್ವೀಕರಿಸಲು ಸತತವಾಗಿ ನಿರಾಕರಿಸಿದೆ.
2011ರಲ್ಲಿ ಅರುಣಾಚಲ ಪ್ರದೇಶದ ಐದು ಕರಾಟೆ ಪಟುಗಳಿಗೆ ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸ್ಟೇಪಲ್ ವೀಸಾ ನೀಡಲಾಗಿತ್ತು. ಅದೇ ವರ್ಷ, ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಅಧಿಕಾರಿ ಮತ್ತು ಅರುಣಾಚಲ ಪ್ರದೇಶದ ವೇಟ್‌ಲಿಫ್ಟರ್‌ಗೆ ಚೀನಾದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್‌ನಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾಗಳನ್ನು ನೀಡಲಾಯಿತು. ನಂತರ ಮತ್ತೆ 2011 ರಲ್ಲಿ, ಅರುಣಾಚಲ ಪ್ರದೇಶದ ಇಬ್ಬರು ಬಿಲ್ಲುಗಾರರಿಗೆ ಚೀನಾದಲ್ಲಿ ಯೂತ್ ವರ್ಲ್ಡ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸ್ಟೇಪಲ್ ವೀಸಾ ನೀಡಲಾಯಿತು. ಭಾರತೀಯ ವಿಮಾನ ನಿಲ್ದಾಣಗಳಲ್ಲಿನ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸ್ಟೇಪಲ್ಡ್ ವೀಸಾಗಳನ್ನು ಮಾನ್ಯ ಮಾಡದ ಕಾರಣ ಪ್ರಯಾಣ ರದ್ದಾಗಿತ್ತು.
ಅರುಣಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಭಾರತೀಯ ಪ್ರಜೆಗಳಿಗೆ ಸ್ಟೇಪಲ್ಡ್ ವೀಸಾಗಳನ್ನು ನೀಡುವುದು ಈ ಪ್ರದೇಶಗಳ ಮೇಲಿನ ಭಾರತದ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಚೀನಾದ ಪ್ರಯತ್ನಗಳ ಭಾಗವಾಗಿದೆ. ಚೀನಾದ ಕ್ರಮಗಳು ತನ್ನದೇ ಭೂಪ್ರದೇಶದ ಕೆಲವು ಭಾಗಗಳ ಮೇಲೆ ಭಾರತದ ನಿಯಂತ್ರಣ ಮತ್ತು ಅಧಿಕಾರವನ್ನು ಪ್ರಶ್ನಿಸುವ ಪ್ರಯತ್ನಗಳೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: IPL 2024: ಆರ್ಸಿಬಿ ನಿರ್ದೇಶಕರಾಗಿ ಮೊ ಬೊಬಾಟ್ ಆಯ್ಕೆ.. ಚಾಲೆಂಜರ್ಸ್ ತಂಡದ ಮೇಲೆ ಹೆಚ್ಚಿದ ನಿರೀಕ್ಷೆ!