ನವದೆಹಲಿ: ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಆರೋಪ ಎದುರಿಸುತ್ತಿರುವ ಉತ್ತರಪ್ರದೇಶದ ಸಂಸದ, ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾದ ಬೆನ್ನಲ್ಲೇ, ತಮ್ಮ ವಿರುದ್ಧ ಆರೋಪ ಮಾಡಿದ ಕುಸ್ತಿಪಟುಗಳ ವಿರುದ್ಧ ಸಂಸದ ಕೇಸ್ ದಾಖಲಿಸಿದ್ದಾರೆ. ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಇತರ ಹಲವು ಕುಸ್ತಿಪಟುಗಳ ವಿರುದ್ಧ ನೇರವಾಗಿ ಆರೋಪ ಮಾಡಿರುವ ಅವರು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ದೀಪಕ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಕುಸ್ತಿಪಟುಗಳು ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಕುಸ್ತಿ ಸಂಘದ ಮುಖ್ಯಸ್ಥ ಹುದ್ದೆಯಿಂದ ತಮನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುವ ಮೂಲಕ ತನ್ನ ಪ್ರತಿಷ್ಠೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಮೇಲುಸ್ತುವಾರಿ ಸಮಿತಿಗೆ ಬಾಕ್ಸರ್ ಮೇರಿಕೋಮ್ ನೇತೃತ್ವ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲಿರುವ ಐವರು ಸದಸ್ಯರ ಉಸ್ತುವಾರಿ ಸಮಿತಿಯನ್ನು ಬಾಕ್ಸಿಂಗ್ ಪಟು ಎಂ ಸಿ ಮೇರಿ ಕೋಮ್ ಅವರು ನೇತೃತ್ವ ವಹಿಸಲಿದ್ದಾರೆ. ಸರ್ಕಾರ ನೇಮಿಸಿದ ಸಮಿತಿಯು ಮುಂದಿನ ಒಂದು ತಿಂಗಳೊಳಗೆ ಡಬ್ಲ್ಯುಎಫ್‌ಐನ ದೈನಂದಿನ ಚಟುವಟಿಕೆ ಮತ್ತು ಆರೋಪದ ಬಗ್ಗೆ ತನಿಖೆ ನಡೆಸಲಿದೆ.
ಸಮಿತಿಯಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಮಿಷನ್ ಒಲಿಂಪಿಕ್ನ ಸದಸ್ಯೆ ತೃಪ್ತಿ ಮುರ್ಗುಂಡೆ, ಮಾಜಿ ಟಾಪ್ಸ್ ಸಿಇಒ ರಾಜಗೋಪಾಲನ್ ಮತ್ತು ಎಸ್ಎಐ ಮಾಜಿ ಕಾರ್ಯಕಾರಿ ನಿರ್ದೇಶಕಿ ರಾಧಿಕಾ ಶ್ರೀಮಾನ್ ಅವರು ಇತರ ಸದಸ್ಯರಾಗಿದ್ದಾರೆ. ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ಘೋಷಿಸಿದ್ದರು.
ಡಬ್ಲ್ಯುಎಫ್‌ಐ ಮತ್ತು ಅದರ ಅಧ್ಯಕ್ಷ ಸಿಂಗ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಗಂಭೀರ ಲೈಂಗಿಕ ಕಿರುಕುಳ ಮತ್ತು ಕೊಲೆ ಬೆದರಿಕೆ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಮೂರು ದಿನ ಧರಣಿ ನಡೆಸಿದ್ದರು. ಕೇಂದ್ರ ಸಚಿವ ಠಾಕೂರ್ ಅವರ ಭರವಸೆಯ ಮೇರೆಗೆ ಧರಣಿ ಕೈಬಿಟ್ಟಿದ್ದರು.
ಕುಸ್ತಿಪಟುಗಳು ಮಾಡಿರುವ ಆರೋಪಗಳ ಮೇಲೆ ಸಮಿತಿಯು ನಾಲ್ಕು ವಾರಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅನುರಾಗ್ ಠಾಕೂರ್ ಭರವಸೆ ನೀಡಿದ್ದರು. ತನಿಖೆ ಮುಗಿಯುವವರೆಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹುದ್ದೆಯಿಂದ ಹಿಂದೆ ಸರಿಯಲಿದ್ದಾರೆ. ತನಿಖೆಗೆ ಸಹಕರಿಸಲಿದ್ದಾರೆ. ಮೇಲ್ವಿಚಾರಣಾ ಸಮಿತಿಯು ತನಿಖೆ ಪೂರ್ಣಗೊಳ್ಳುವವರೆಗೆ ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರಗಳನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದರು.