ಲಿಮಾ: ಪೇರು ದೇಶದ ರಾಜಧಾನಿ ಲಿಮಾದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ನಡೆಯುತ್ತಿದೆ. ಈ ಟೂರ್ನಿಯ ಮೂರನೇ ದಿನ ನಡೆದ ಪಂದ್ಯದಲ್ಲಿ ಭಾರತೀಯ ಶೂಟರ್ ಮನು ಬಾಕರ್ 2ನೇ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಮತ್ತೊಬ್ಬ ಶೂಟರ್ ಸರಬ್ಜೋತ್ ಸಿಂಗ್ ಅವರ ಜೊತೆಗೂಡಿ ಮಿಶ್ರ ತಂಡ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಬಾಕರ್ 2ನೇ ಚಿನ್ನದ ಪದಕ ತಮ್ಮದಾಗಿಸಿಕೊಂಡು ದಾಖಲೆ ಸೃಷ್ಟಿಸಿದರು.
ಇದಕ್ಕೂ ಮೊದಲು ಶುಕ್ರವಾರ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 241.3 ಪಾಯಿಂಟ್ ಪಡೆಯುವ ಮೂಲಕ ಬಾಕರ್ ಮೊದಲ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
ಶುಕ್ರವಾರ ನಡೆದ ಸ್ಕೀಟ್ ಟೀಮ್ ಈವೆಂಟ್‌ನಲ್ಲಿ ಭಾರತೀಯ ಮಹಿಳಾ ಶೂಟರ್‌ಗಳಾದ ಆರಿಬಾ ಖಾನ್, ರೈಜಾ ಧಿಲ್ಲೋನ್ ಮತ್ತು ಗನೆಮತ್ ಸೆಖೋನ್ ಅವರು ಒಟ್ಟು 6 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಸಾಧನೆ ತೋರಿದ್ದರು.
ಸ್ಕೀಟ್ ಟೀಮ್ ಈವೆಂಟ್‌ನಲ್ಲಿ ಪುರುಷರು ಕಂಚು ಗೆದ್ದಿದ್ದು, ರಾಜ್‌ವೀರ್ ಗಿಲ್, ಆಯುಷ್ ರುದ್ರರಾಜು ಮತ್ತು ಅಭಯ್ ಸಿಂಗ್ ಸೆಖೋನ್ ಅವರ ಭಾರತ ತಂಡವು ಟರ್ಕಿಯ ಅಲಿ ಕ್ಯಾನ್ ಅರಬಾಸಿ, ಅಹ್ಮತ್ ಬರಾನ್ ಮತ್ತು ಮುಹಮ್ಮತ್ ಸೇಹುನ್ ಕಯಾ ಅವರ ವಿರುದ್ಧ ಸೋಲು ಅನುಭವಿಸಿ, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮೂವರು ಸ್ಪರ್ಧಿಸುವ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್‌ಗಳಾದ ಶ್ರೀಕಾಂತ್ ಧನುಷ್, ರಾಜಪ್ರೀತ್ ಸಿಂಗ್ ಮತ್ತು ಪಾರ್ಥ್ ಮಖಿಜಾ ಅವರು ಗೆಲುವು ಸಾಧಿಸಿದ್ದಾರೆ.
ಫೈನಲ್‌ನಲ್ಲಿ, ಅವರು ಒಲಿಂಪಿಕ್ ಚಾಂಪಿಯನ್ ವಿಲಿಯಮ್ ಶಾನರ್ ಅವರನ್ನು ಒಳಗೊಂಡಿದ್ದ ಅಮೆರಿಕದ ರೈಲಾನ್ ಕಿಸೆಲ್ ಮತ್ತು ಜಾನ್ ಬ್ಲಾಂಟನ್ ಅವರ ತಂಡವನ್ನು 16-6 ಪಾಯಿಂಟ್ಗಳ ಅಂತರದಿಂದ ಸೋಲಿಸಿದ್ದರು.
ರಾಜ್‌ಪ್ರೀತ್ ಸಿಂಗ್ ಮತ್ತು ಆತ್ಮಿಕಾ ಗುಪ್ತಾ ಜೋಡಿ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 15-17 ಅಂತರದಲ್ಲಿ ಅಮೆರಿಕದ ವಿಲಿಯಂ ಶಾನರ್ ಮತ್ತು ಮೇರಿ ಕ್ಯಾರೊಲಿನ್ ಟಕ್ಕರ್ ವಿರುದ್ಧ ಹೋರಾಡಿ ಬೆಳ್ಳಿ ಪದಕ ಪಡೆದಿದ್ದರು.
ಈಗ ಭಾರತೀಯ ಶೂಟರ್ಗಳು ನಾಲ್ಕು ಚಿನ್ನದ ಪದಕ ಮತ್ತು ಐದು ಬೆಳ್ಳಿಯ ಪದಕ ಮತ್ತು ಎರಡು ಕಂಚಿನ ಪದಕ ಸೇರಿದಂತೆ ಒಟ್ಟು 11 ಪದಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ 2021: ಗಾಯಕ್ವಾಡ್ ಶತಕ ವ್ಯರ್ಥ; ಚೆನ್ನೈ ವಿರುದ್ಧ ಆರ್‌ಆರ್‌ಗೆ 7 ವಿಕೆಟ್‌ಗಳ ಭರ್ಜರಿ ಗೆಲುವು