ನವದೆಹಲಿ : ಭಾರತದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಬುಧವಾರ ನಡೆದ ಐಎಸ್ಎಸ್ಎಫ್ ವಿಶ್ವಕಪ್ನ 50 ಮೀಟರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತಕ್ಕೆ ಸಂದ 8ನೇ ಚಿನ್ನದ ಪದಕ ಇದಾಗಿದೆ. ತೋಮರ್ ವಿಶ್ವದ ನಂಬರ್ 1 ಹಂಗೇರಿಯ ಇಸ್ತ್ವಾನ್ ಪೆನಿ ಅವರನ್ನು ಸೋಲಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಫೈನಲ್ನಲ್ಲಿ 20 ವರ್ಷದ ಪ್ರತಾಪ್ ಸಿಂಗ್ ತೋಮರ್ ಒಟ್ಟು 462.5 ಅಂಕ ಕಲೆ ಹಾಕಿದರು.ಬೆಳ್ಳಿ ಗೆದ್ದ ಇಸ್ತವಾನ್ ಪೆನಿ 461.6 ಅಂಕ ಪಡೆದರು. ಡೆನ್ಮಾರ್ಕ್‌ನ ಸ್ಟೆಫನ್ ಓಲ್ಸೆನ್ 450.9 ಅಂಕ ಪಡೆದು ಕಂಚಿನ ಪದಕ ಪಡೆದರು.
ಇದನ್ನು ಓದಿ:ಶೂಟಿಂಗ್ ವಿಶ್ವಕಪ್: ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟ ಬಜ್ವಾ-ಸೆಖೋನ್
ಇದೇ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಸಂಜೀವ್ ರಜಪೂತ್ ಮತ್ತು ನೀರಜ್ ಕುಮಾರ್ 6 ಮತ್ತು 8ನೇ ಸ್ಥಾನ ಪಡೆದರು. ಭಾರತ ಈ ವಿಶ್ವಕಪ್ನಲ್ಲಿ 8 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕಗಳೊಂದಿಗೆ 16 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಮೆರಿಕಾ ಮತ್ತು ಕಜಕಸ್ತಾನ್ ನಂತರದ ಸ್ಥಾನದಲ್ಲಿವೆ.