ಸಿಡ್ನಿ: ಕೊರೊನಾ ವೈರಸ್ ಕಾಯಿಲೆಗೆ ವ್ಯಾಕ್ಸಿನ್ ಕಂಡು ಹಿಡಿದ ಬಳಿಕವಷ್ಟೇ ಒಲಿಂಪಿಕ್ ನಡೆಸುವುದು ಸೂಕ್ತ ಎಂಬ ಕೆಲ ವಿಜ್ಞಾನಿ ಹಾಗೂ ವೈದ್ಯರುಗಳ ಸಲಹೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಕಮೀಟಿಯ ಸಮನ್ವಯ ಸಮಿತಿ ತಳ್ಳಿ ಹಾಕಿದೆ.
ವ್ಯಾಕ್ಸಿನ್ ಕಂಡುಹಿಡಿದ ಮೇಲೆಯೇ ಒಲಿಂಪಿಕ್ ನಡೆಯಲಿ ಎಂಬ ಸಲಹೆಗಳಿಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಒಲಿಂಪಿಕ್ ಕಮೀಟಿಯ ಆಸ್ಟ್ರೇಲಿಯಾ ಸದಸ್ಯ ಪ್ರತಿನಿಧಿ ಜಾನ್ ಕೋಟ್ಸ್ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಮುಂದೂಡಿದ ನಂತರ ನಾವು ಈಗಾಗಲೇ ಮುಂದಿನ ದಿನಾಂಕಗಳಿಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ನಾವು ದಿನಾಂಕಗಳನ್ನು ನಿರ್ಧರಿಸಿದ್ದು, ಅದರಂತೆ ನಾವು ಮುನ್ನಡೆಯಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾಗತಿಕವಾಗಿ ಕೊರೊನಾ ವೈರಸ್ ಕಾಯಿಲೆ ನಿಯಂತ್ರಣಕ್ಕೆ ಬರಬೇಕಿದೆ. ಅಂದರೆ ಇದಕ್ಕಾಗಿ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ನಂತರವೇ 2021 ಟೋಕಿಯೊ ಒಲಿಂಪಿಕ್ ನಡೆಸಲು ಸಾಧ್ಯ ಎಂದು ಜಪಾನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಯೋಶಿಟಾಕೆ ಯೋಕುಕುರಾ ಮಂಗಳವಾರ ಹೇಳಿಕೆ ನೀಡಿದ ಬೆನ್ನಲ್ಲೇ ಈ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ಟೋಕಿಯೊ ಒಲಿಂಪಿಕ್ಸ್ ಮುಂದೂಡಿದ ನಂತರ ನಾವು ಈಗಾಗಲೇ ಮುಂದಿನ ದಿನಾಂಕಗಳಿಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ.
2021 ರ ಒಲಿಂಪಿಕ್ ಕ್ರೀಡಾಕೂಟ ನಡೆಯುವುದು ವ್ಯಾಕ್ಸಿನ್ ಕಂಡುಹಿಡಿಯುವುದರ ಮೇಲೆ ಅವಲಂಬಿತವಾಗಿದೆ ಎಂದು ಎಡಿನ್ಬರ್ಗ್ ವಿವಿ ಜಾಗತಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ದೇವಿ ಶ್ರೀಧರ ಕೂಡ ಹೇಳಿದ್ದು ಚರ್ಚೆ ಹುಟ್ಟುಹಾಕುವಂತಾಗಿದೆ.