ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ಗೆ ಭಾನುವಾರ ತೆರೆ ಎಳೆಯಲಾಗಿದ್ದು, ಭಾರತೀಯ ಕ್ರೀಡಾಪಟುಗಳು ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ.
ಭಾರತೀಯ ಕ್ರೀಡಾಪಟುಗಳು ಟೋಕಿಯಾದಿಂದ ನವದೆಹಲಿ ಮಧ್ಯಾಹ್ನ 3ರಿಂದ 4 ಗಂಟೆ ವೇಳೆಗೆ ಬಂದಿಳಿಯಲಿದ್ದಾರೆ ಎಂದು ತಿಳಿದು ಬಂದಿದ್ದು ಏರ್‌ಪೋರ್ಟ್ ಪೊಲೀಸ್ ಠಾಣೆಯ ಅಡಿ ಇರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಭದ್ರತೆ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಿದೆ.
ಭಾರತೀಯ ಕ್ರೀಡಾಪಟುಗಳ ತಂಡ ಟೋಕಿಯೋ ಒಲಿಂಪಿಕ್ಸ್ನಲ್ಲಿ ಹಿಂದಿನ ಒಲಿಂಪಿಕ್ಸ್ಗಿಂತ ಅತ್ಯುತ್ತಮ ಪ್ರದರ್ಶನ ತೋರಿದೆ. ಅದರಲ್ಲೂ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಅದ್ಭುತ ಪ್ರದರ್ಶನ ತೋರಿಸಿವೆ.
ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಗಾಗಿ ಹೆಚ್ಚಿನ ಅಭಿಮಾನಿಗಳು ಸೇರುವ ಸಂಭವವಿದ್ದು ಟರ್ಮಿನಲ್ 3ರಲ್ಲಿ ಭದ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ದೆಹಲಿ ಪೊಲೀಸ್ ಜೊತೆಗೆ ಸಿಐಎಸ್ಎಫ್ ಮತ್ತು ಡಾಗ್ ಸ್ಕ್ವಾಡ್ ಕೂಡ ವಿಮಾನ ನಿಲ್ದಾಣದ ಸುತ್ತಲೂ ಪರಿಶೀಲನೆ ನಡೆಸುತ್ತಿವೆ.
ಸಾಮಾನ್ಯ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಕ್ರೀಡಾ ಪ್ರೇಮಿಗಳ ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ನೋಡುವ ಉತ್ಸಾಹದಿಂದ ಇಲ್ಲಿ ನೆರೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಅನಗತ್ಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್ಗೆ ಮಾಹಿತಿ ನೀಡಿದ್ದಾರೆ.
ಇದೇ ದಿನ ಸಂಜೆ ಅಶೋಕ ಹೋಟೆಲ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಅಥ್ಲಿಟಿಕ್ಸ್ ಅಸೋಸಿಯೇಷನ್ ಹಾಗೂ ಕ್ರೀಡಾ ಸಚಿವಾಲಯದಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇದನ್ನು ಓದಿ: 'ಅರಿಗಾಟೋ' ಟೋಕಿಯೋ! ಒಗ್ಗಟ್ಟಿನ ಸಂದೇಶದೊಂದಿಗೆ ಒಲಿಂಪಿಕ್ಸ್‌ಗೆ ವೈಭವದ ತೆರೆ