ಸಲಾಲಾ (ಒಮನ್): ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಶೂಟೌಟ್‌ನಲ್ಲಿ 2-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿನೊಂದಿಗೆ ಭಾರತ ತಂಡ ಎಫ್‌ಐಎಚ್ ಪುರುಷರ ಹಾಕಿ ಫೈವ್ಸ್ 2024ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಒಮನ್‌ನ ಸಲಾಲಾದಲ್ಲಿ ನಡೆದ ಪಂದ್ಯವು ಆರಂಭಿಕ ಕ್ಷಣದಿಂದಲೇ ರೋಚಕತೆ ಮೂಡಿಸಿತ್ತು. ಮುಕ್ತಾಯದ ವೇಳೆಗೆ ಉಭಯ ತಂಡದ ಆಟಗಾರರು 4-4 ಗೋಲು ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಈ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಣಿಂದರ್ ಸಿಂಗ್ ಟೀಂ 2 ಗೋಲು ಗಳಿಸಿ ಅಂತರವನ್ನು 6-4ಕ್ಕೆ ಹೆಚ್ಚಿಸಿಕೊಂಡು ಟ್ರೋಫಿ ಜಯಿಸಿತು.
ಪಂದ್ಯದ ಫಲಿತಾಂಶಕ್ಕೆ ನಿರ್ಣಾಯಕವಾಗಿದ್ದ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಾಬಲ್ಯ ಮೆರೆದ ಭಾರತ ತಂಡದ ನಾಯಕ ಮಣಿಂದರ್ ಸಿಂಗ್ ಹಾಗೂ ಗುರ್ಜೋತ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು. ಪಾಕಿಸ್ತಾನದ ಪರ ಅರ್ಷದ್ ಲಿಯಾಖತ್ ಮತ್ತು ಮುಹಮ್ಮದ್ ಮುರ್ತಾಜ ಹೊಡೆದ ಚೆಂಡನ್ನು ಭಾರತದ ಗೋಲ್ ಕೀಪರ್ ಸೂರಜ್ ಕರ್ಕೆರಾ ರಕ್ಷಣಾತ್ಮಕವಾಗಿ ತಡೆದಿದ್ದರಿಂದ ಭಾರತ 6-4 ಗೋಲುಗಳ ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾನ್ ಹಾಕಿ ಫೈವ್ಸ್ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿಯಿತು. ಇದರೊಂದಿಗೆ ಹಾಕಿ ಫೈವ್ಸ್ ಮಾದರಿಯಲ್ಲಿ ನಡೆದ 3 ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಇತಿಹಾಸ ಬರೆದಿದೆ.
ಪೆನಾಲ್ಟಿ ಶೂಟೌಟ್ಗೂ ಮೊದಲು ನಡೆದ ಪಂದ್ಯದಲ್ಲಿ ಆರಂಭಿಕ ಕ್ಷಣದಿಂದ ಗೋಲು ಗಳಿಸಲು ಇತ್ತಂಡಗಳೂ ಪ್ರಬಲ ಪೈಪೋಟಿ ನಡೆಸಿದ್ದವು. ಪಂದ್ಯದ ಮೊದಲ 5 ನಿಮಿಷದಲ್ಲಿ ಪಾಕ್ನ ಮುಂಚೂಣಿ ಆಟಗಾರರು ಗೋಲು ಗಳಿಸಿದರು. ಆದರೆ ಕೆಲವೇ ಕ್ಷಣದಲ್ಲಿ ಜುಗ್ರಾಜ್ ಸಿಂಗ್ ಗೋಲು ಬಾರಿಸಿ ಸ್ಕೋರ್ ಸಮಬಲ ಸಾಧಿಸಿದರು. 10ನೇ ನಿಮಿಷದಲ್ಲಿ ನಾಯಕ ಮಣಿಂದರ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಅಂತರವನ್ನು 2-1ಕ್ಕೆ ಹೆಚ್ಚಿಸಿದರು. ಆದರೆ ರಾಣಾ ಅಬ್ದುಲ್ಲಾ, ಹಯಾತ್ ಜಿರ್ಕಿಯ ತಲಾ ಇಂದು ಗೋಲು ಗಳಿಸಿದ ಪರಿಣಾಮ ಮಧ್ಯಂತರ ಅವಧಿ ವೇಳೆಗೆ ಪಾಕಿಸ್ತಾನ 3-2 ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಲಿಯಾಕತ್ ಅರ್ಷದ್ ಪಾಕ್ ಪರ ಗೋಲು ಗಳಿಸಿದರೆ, ಪಂದ್ಯ ಮುಗಿಯಲು ಇನ್ನೂ 10 ನಿಮಿಷ ಕಾಲ ಉಳಿದಿದ್ದಾಗ ಭಾರತದ ಮೊಹಮ್ಮದ್ ರಹೀಲ್ 2 ಗೋಲು ಗಳಿಸಿ ಪಂದ್ಯವನ್ನು 4-4 ರಿಂದ ಸಮಬಲಗೊಳಿಸಿದರು. ಸೆಮಿಫೈನಲ್ನಲ್ಲಿ ಭಾರತ ತಂಡ ಬಲಿಷ್ಠ ಮಲೇಷ್ಯಾ ವಿರುದ್ಧ 10-4 ಅಂತರದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತ್ತು. ಇತ್ತ ಪಾಕಿಸ್ತಾನ ಆತಿಥೇಯ ಒಮನ್ ವಿರುದ್ಧ 7-3 ಅಂತರದಿಂದ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು.
2 ಲಕ್ಷ ರೂ ಬಹುಮಾನ: ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಆಟಗಾರರಿಗೆ ಭಾರತ ಹಾಕಿ ಫೆಡರೇಷನ್ 2 ಲಕ್ಷ ನಗದು ಬಹುಮಾನ ಘೋಷಿಸಿದೆ. ಅಲ್ಲದೇ ಸಹಾಯಕ ಸಿಬ್ಬಂದಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದೆ.
ಏನಿದು ಹಾಕಿ ಫೈವ್ಸ್?: ಹೆಸರೇ ಹೇಳುವಂತೆ ಇದು 11 ಜನರಿಗೆ ಬದಲಾಗಿ ಕೇವಲ 5 ಆಟಗಾರರ (ಗೋಲ್ ಕೀಪರ್ ಸೇರಿ) ತಂಡ ಆಡುವ ಆಟ. ಟಿ20 ಕ್ರಿಕೆಟ್ನಂತೆ ಇದು ಚುಟುಕು ಹಾಕಿ. ಎಂದಿನ ಹಾಕಿ (91.4-55 ಮೀ.) ಮೈದಾನಕ್ಕಿಂತ ಸುಮಾರು ಅರ್ಧದಷ್ಟು (55-41.70 ಮೀ.) ಮೈದಾನದಲ್ಲಿ ಪಂದ್ಯ ನಡೆಯುತ್ತದೆ. ತಲಾ 30 ನಿಮಿಷಗಳ ಎರಡು ಅವಧಿಯಲ್ಲಿ ಪಂದ್ಯ ನಡೆಯುತ್ತದೆ.
ಇದನ್ನು ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಹಾಕಿ ಆಟಗಾರರಿಗೆ ಬೆಂಗಳೂರಿನಲ್ಲಿ ವಿಶೇಷ ಬೀಳ್ಕೊಡುಗೆ