ವಾರಂಗಲ್ನಲ್ಲಿ ನಡೆಯುತ್ತಿರುವ 60ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಹರ್ಮಿಲನ್ ಕೌರ್ ಬೈನ್ಸ್ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 19 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. ಹೊಸ ದಾಖಲೆ ಬರೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಗುರುವಾರ 60ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 19 ವರ್ಷದ ಕೌರ್ 4:05.39 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದರೊಂದಿಗೆ 2002ರ ಏಷ್ಯನ್ ಗೇಮ್ಸ್‌ನಲ್ಲಿ ಸುನಿತಾ ರಾಣಿ ನಿರ್ಮಿಸಿದ್ದ (4:06.03 ಸೆಕೆಂಡ್) ದಾಖಲೆಯನ್ನು ಮುರಿದರು. ಇದರ ಜೊತೆಗೆ 2006ರಲ್ಲಿ ಓಪಿ ಜೈಶಾ (4:11.83 ಸೆಕೆಂಡ್) ನಿರ್ಮಿಸಿದ್ದ ಕೂಟ ದಾಖಲೆಯನ್ನು ಸಹ ಮುರಿದರು.
2020ರ ಜನವರಿಯಿಂದ ಎಂಟು ರಾಷ್ಟ್ರೀಯ ಮಟ್ಟದ ರೇಸ್‌ಗಳಲ್ಲಿ ಅಜೇಯರಾಗಿರುವ ಹರ್ಮಿಲನ್ 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಕೌರ್ ವಿಫಲರಾದರು. ಇದಕ್ಕಾಗಿ ಅವರು 4:04.20 ನಿಮಿಷದಲ್ಲಿ ಗುರಿ ತಲುಪಬೇಕಿತ್ತು.
ಪುರುಷರ ವಿಭಾಗದ 1500 ಮೀಟರ್ ಓಟದಲ್ಲಿ ಹರಿಯಾಣದ ಪರ್ವೇಜ್ ಖಾನ್, 2 ಬಾರಿಯ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪದಕ ವಿಜೇತ ಅಜಯ್ ಕುಮಾರ್‌ರನ್ನು ಹಿಂದಿಕ್ಕಿ ಜಯಗಳಿಸಿದರು.
100 ಮೀ. ಓಟದ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ದೆಹಲಿಯ ತರನ್‌ಜಿತ್ ಕೌರ್ 11.50 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು ಮತ್ತು ಪುರುಷರ ವಿಭಾಗದಲ್ಲಿ ನರೇಂದ್ರ ಕುಮಾರ್ 10.30 ಸೆಕೆಂಡ್‌ಗಳಲ್ಲಿ ಕ್ರಮಿಸಿ ಗೆಲುವು ದಾಖಲಿಸಿದರು.
ಓದಿ: ಆಸ್ಟ್ರೇಲಿಯಾ ಕೋವಿಡ್: ಜೂನಿಯರ್ ಹಾಕಿ ವಿಶ್ವಕಪ್ನಿಂದ ಹಿಂದೆ ಸರಿದ ಆಸ್ಟ್ರೇಲಿಯಾ ತಂಡ