ಮೆಲ್ಬೋರ್ನ್: ಟೆನಿಸ್ ಸೂಪರ್ ಸ್ಟಾರ್ ನೊವೊಕ್ ಜೊಕೊವಿಕ್ ವೀಸಾ ರದ್ದು ಪಕ್ರರಣದ ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ನಂತರ ಜೋಕೊವಿಕ್ ಭಾನುವಾರ ತಮ್ಮ ದೇಶಕ್ಕೆ ಮರಳಿದ್ದಾರೆ. ವ್ಯಾಕ್ಸಿನೇಷನ್ ಸ್ಟೇಟಸ್ ಬಹಿರಂಗ ಪಡಿಸದ್ದರಿಂದ ಆಸ್ಟ್ರೇಲಿಯಾ ಸರ್ಕಾರ ಅವರ ವೀಸಾವನ್ನು ತಡೆಹಿಡಿದು ಹೋಟೆಲ್ನಲ್ಲಿ ಬಂಧಿಸಿಟ್ಟಿತ್ತು.
ಸೋಮವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆಯ 21ನೇ ಗ್ರ್ಯಾಂಡ್ಸ್ಲ್ಯಾಮ್ ಗೆಲುವಿನ ಕನಸಿನಲ್ಲಿದ್ದ ಜೊಕೊವಿಕ್ ಅವರ ನಿರೀಕ್ಷೆಗೆ ಮೂವರು ನ್ಯಾಯಾಧೀಶರ ಫೆಡರಲ್ ನ್ಯಾಯಾಲವು ಸರ್ಕಾರದ ನಿರ್ಧಾರ ಬೆಂಬಲಿಸಿ ನೀಡಿದ ಸರ್ವಾನುಮತದ ತೀರ್ಪು ದೊಡ್ಡ ಹೊಡೆತ ನೀಡಿದೆ.
ತೀರ್ಪು ಬಂದ ಕೆಲವೇ ಗಂಟೆಗಳ ನಂತರ ಸರ್ಬಿಯನ್ ಆಟಗಾರ ಮೆಲ್ಬೋರ್ನ್ನ ವಿಮಾನ ನಿಲ್ದಾಣಕ್ಕೆ ತೆರಳಿದರು. ಫೆಡರಲ್ ಏಜೆಂಟ್ ಅವರನ್ನು ಮತ್ತು ಅವರ ತಂಡವನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದರು. ಅಲ್ಲಿಂದ ಜೊಕೊವಿಕ್ ತಂಡ ದುಬೈಗೆ ಹೋಗುವ ಎಮಿರೇಟ್ಸ್ ವಿಮಾನವನ್ನು ಹತ್ತಿದರು.
ಇದಕ್ಕೂ ಮುನ್ನ ಮಾಧ್ಯಮದ ಜೊತೆ ಮಾತನಾಡಿದ್ದ ಅವರು, ನನ್ನ ವೀಸಾ ಹಿಂಪಡೆಯುವಿಕೆಯಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಇದರರ್ಥ ನಾನು ಆಸ್ಟ್ರೇಲಿಯಾದಲ್ಲಿ ವಾಸಿಸಲು ಸಾಧ್ಯವಿಲ್ಲ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ ಮತ್ತು ದೇಶದಿಂದ ನಿರ್ಗಮಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಹಕರಿಸುತ್ತೇನೆ ಎಂದು ತಿಳಿಸಿದ್ದರು.
2008ರಿಂದ 2021ರವರೆಗೆ ಒಟ್ಟು 9 ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ಈ ಬಾರಿ 10ನೇ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಸರ್ಬಿಯನ್ ಸ್ಟಾರ್ ಒಟ್ಟು 20 ಗ್ರ್ಯಾಂಡ್ಸ್ಲ್ಯಾಮ್ಗಳನ್ನ ಗೆದ್ದು ನಡಾಲ್ ಮತ್ತು ಫೆಡರರ್ ಜೊತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದರು.
ಇದನ್ನೂ ಓದಿ:ಟೆನ್ನಿಸ್ ದಿಗ್ಗಜ ಜೊಕೊವಿಕ್ ವೀಸಾ ರದ್ದು: ಗಡಿಪಾರಿಗೆ ಆಸ್ಟ್ರೇಲಿಯಾ ಸಿದ್ಧತೆ