ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರಿಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನಾಯಿತಿ ನೀಡಿ, ಏಷ್ಯನ್ ಗೇಮ್ಸ್‌ನಲ್ಲಿ ಆಡಲು ಅವಕಾಶ ನೀಡುವ ಕುರಿತು ದೆಹಲಿ ಹೈಕೋರ್ಟ್ ನಾಳೆ ಶನಿವಾರ ತೀರ್ಪು ನೀಡಲಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು, ಭಾನುವಾರದಂದು ವಿಚಾರಣೆ ಮುಕ್ತಾಯವಾಗುತ್ತದೆ. ನಾಳೆ ಆದೇಶ ಪ್ರಕಟಿಸುವುದು. ಯಾರು ಉತ್ತಮ ಕುಸ್ತಿಪಟು ಎಂಬ ವಿಷಯವನ್ನು ನಾವು ಪರಿಗಣಿಸುವುದಿಲ್ಲ. ಪ್ರಕ್ರಿಯೆಯನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನೋಡುತ್ತೇವೆ ಎಂದು ತಿಳಿಸಿದರು.
ಬಜರಂಗ್, ವಿನೇಶ್ಗೆ ನೀಡಿರುವ ವಿನಾಯಿತಿ ರದ್ದುಗೊಳಿಸಲು ಒತ್ತಾಯ: ಇದಕ್ಕೂ ಮುನ್ನ ಗುರುವಾರ, ಕುಸ್ತಿಪಟುಗಳಾದ ಅವಿನಾಶ್ ಪಂಗಲ್ ಮತ್ತು ಸುಜಿತ್ ಕಲ್ಕಲ್ ಅವರ ಅರ್ಜಿಯ ವಿಚಾರಣೆಯ ವೇಳೆ, ನ್ಯಾಯಾಲಯವು ಅಫಿಡವಿಟ್ ಸಲ್ಲಿಸುವಂತೆ ಡಬ್ಲ್ಯುಎಫ್‌ಐಗೆ ತಿಳಿಸಿತ್ತು. ಗುರುವಾರ ನಡೆದ ವಿಚಾರಣೆಯಲ್ಲಿ ವಕೀಲರಾದ ಹೃಷಿಕೇಶ್ ಬರುವಾ ಮತ್ತು ಅಕ್ಷಯ್ ಕುಮಾರ್ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತಾತ್ಕಾಲಿಕ ಸಮಿತಿಯಿಂದ ಈ ಬಗ್ಗೆ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದಾರೆ. ಬಜರಂಗ್ ಮತ್ತು ವಿನೇಶ್ ಅವರಿಗೆ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸಬೇಕೆಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಕುಸ್ತಿಪಟುಗಳಿಗೆ ವಿನಾಯಿತಿ ನೀಡದಂತೆ ಆಗ್ರಹ: ಯಾವುದೇ ಕುಸ್ತಿಪಟುಗಳಿಗೆ ವಿನಾಯಿತಿ ನೀಡದೆ, ಏಷ್ಯನ್ ಗೇಮ್ಸ್‌ನಲ್ಲಿ ನೇರವಾಗಿ ಆಡಲು ಅವಕಾಶ ನೀಡಬಾರದು. ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ನ್ಯಾಯಯುತವಾಗಿ ಆಯ್ಕೆ ಪ್ರಕ್ರಿಯೆಗೆ ಅವಕಾಶ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಈ ವರ್ಷದ ಜನವರಿಯಲ್ಲಿ ಉನ್ನತ ಆಟಗಾರರು ಧರಣಿ ನಡೆಸಿದ್ದರು. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಹೋರಾಟದಲ್ಲಿ ಬಜರಂಗ್ ಮತ್ತು ವಿನೇಶ್ ಅವರ ಪರವಾಗಿ ನಿಂತ ಜೂನಿಯರ್ ಕುಸ್ತಿಪಟುಗಳಲ್ಲಿ ಪಂಗಲ್ ಕೂಡಾ ಒಬ್ಬರು.
ಅಂತಿಮ ಮೌಲ್ಯಮಾಪನದ ಮೊದಲು ನಿರ್ಧಾರ: ವಿನೇಶ್ ಫೋಗಟ್ ಏಷ್ಯನ್ ಗೇಮ್ಸ್‌ಗೆ ನೇರ ಪ್ರವೇಶ ಪಡೆದಿದ್ದಾರೆ. ಆದರೆ, ಅವರು ಕಳೆದ ಒಂದು ವರ್ಷದಿಂದ ತರಬೇತಿ ಪಡೆದಿಲ್ಲ ಎಂದು ಪಂಗಲ್ ಆರೋಪಿಸಿದ್ದಾರೆ. ಶನಿವಾರ ಮತ್ತು ಭಾನುವಾರ ನಡೆಯಲಿರುವ ಟ್ರಯಲ್ಸ್‌ನಿಂದ ಈ ಇಬ್ಬರೂ ಕುಸ್ತಿಪಟುಗಳಿಗೆ ವಿನಾಯಿತಿ ನೀಡಲು ಐಒಎ ತಾತ್ಕಾಲಿಕ ಸಮಿತಿ ನಿರ್ಧರಿಸಿದೆ. ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ದೇಶದ ಕುಸ್ತಿ ತಂಡದ ಆಟಗಾರರ ಅಂತಿಮ ಮೌಲ್ಯಮಾಪನವನ್ನು ಚೀನಾಕ್ಕೆ ತೆರಳುವ ಮೊದಲೇ ಮಾಡಲಾಗುತ್ತದೆ ಎಂದು ಐಒಎ ಹೇಳಿದೆ.