ನವದೆಹಲಿ: ದೀಪಕ್ ಕಬ್ರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಜಿಮ್ನಾಸ್ಟಿಕ್ನಲ್ಲಿ ಒಬ್ಬ ಅಥ್ಲೀಟ್ ಆಗಿ ಸ್ಪರ್ಧಿಸಲು ಹೆಚ್ಚು ಮೂಲಸೌಕರ್ಯ ಹೊಂದಿಲ್ಲದಿರುವುದರಿಂದ ತೀರ್ಪುಗಾರನಾಗಿ ತಮ್ಮ ಒಲಿಂಪಿಕ್ಸ್ ಕನಸನ್ನು ಕಬ್ರಾ ಪೂರೈಸಿಕೊಂಡಿದ್ದಾರೆ. ಈ ಮೂಲಕ ಒಲಂಪಿಕ್ಸ್ನಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಜುಲೈ 13ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪುರುಷರ ವಿಭಾಗದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ನಲ್ಲಿ ತೀರ್ಪುಗಾರರಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.
"ನನಗೆ ಕಳೆದ ವರ್ಷ ಮಾರ್ಚ್ನಲ್ಲಿ ತೀರ್ಪುಗಾರನಾಗಿ ಕಾರ್ಯನಿರ್ವಹಿಸಲು ಆಹ್ವಾನ ಬಂದಿತ್ತು. ಆದರೆ ಕೋವಿಡ್ನಿಂದ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತು. ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುವಂತಾಯಿತು. ಈ ವರ್ಷ ಏಪ್ರಿಲ್ನಲ್ಲಿ ದೃಢೀಕರಣ ಸಿಕ್ಕಿತು. ಆದರೆ ಕೋವಿಡ್ 19 ಬಿಕ್ಕಟ್ಟಿದ್ದಿದ್ದರಿಂದ ಒಲಿಂಪಿಕ್ಸ್ ನಡೆಯುವುದೇ ಅಥವಾ ಇಲ್ಲವೇ ಎನ್ನುವ ಗೊಂದಲವಿತ್ತು. ಈಗ ನನಗೆ ಸಂತೋಷವಾಗಿದೆ, ನನ್ನ ಒಲಿಂಪಿಕ್ಸ್ ಕನಸನ್ನು ಈ ರೀತಿ ಬದುಕಿಸಿಕೊಳ್ಳಲಿದ್ದೇನೆ" ಎಂದು ಪಿಟಿಐಗೆ ಕಬ್ರಾ ತಿಳಿಸಿದ್ದಾರೆ.
‘33 ವರ್ಷದ ಮಹರಾಷ್ಟ್ರದ ಕಬ್ರಾ ಈ ಕ್ರೀಡೆಯನ್ನು ತುಂಬಾ ತಡವಾಗಿ ಆಯ್ಕೆ ಮಾಡಿಕೊಂಡರು. ಆದರೆ ಅಥ್ಲೀಟ್ ಆಗಲು ತಮ್ಮ ಮೂಲ ಸೌಲಭ್ಯಗಳ ಬಲಿಷ್ಠವಾಗಿಲ್ಲ ಎಂಬುದನ್ನು ಆದಷ್ಟು ಬೇಗ ಅವರು ಅರಿತುಕೊಂಡಿದ್ದು ರಾಷ್ಟೀಯ ಮಟ್ಟದಲ್ಲಿ ಸ್ಪರ್ಧಿಸಿದರು. ನಂತರ ಅವರ ಕೋಚ್ ಕೌಶಿಕ್ ಅವರಿಂದ ಪ್ರೇರಣೆ ಪಡೆದು ತೀರ್ಪುಗಾರನಾಗಲು ಕೋರ್ಸ್ ಮುಗಿಸಿ ಅದರಲ್ಲಿ ಟಾಪರ್ ಆದರು.
ಭಾರತದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2010ರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ನಂತರ 2014ರ ಏಷ್ಯನ್ ಗೇಮ್ಸ್ ಮತ್ತು ಯೂತ್ ಗೇಮ್ಸ್ನಲ್ಲಿ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾದರು. ನಂತರ 2018 ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ , ಯೂತ್ ಗೇಮ್ಸ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಇದೀಗ ಒಲಿಂಪಿಕ್ಸ್ನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುವ ಮೂಲಕ ಭಾರತಕ್ಕೆ ಮತ್ತೊಂದು ಗೌರವ ತಂದುಕೊಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪ್ರಣತಿ ನಾಯಕ್ ಜಿಮ್ನಾಸ್ಟಿಕ್ನಲ್ಲಿ ಸ್ಪರ್ಧಿಸಲಿರುವ ಏಕೈಕ ಭಾರತೀಯರಾಗಿದ್ದಾರೆ. ಅವರು 2019ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದರು.
ಇದನ್ನೂ ಓದಿ: Tokyo Olympics: ಜಾವಲಿನ್ ಪಟು ನೀರಜ್ ಚೋಪ್ರಾ ಮೇಲೆ ಭಾರತದ ಭರವಸೆ