ಬರ್ಮಿಂಗ್‌ಹ್ಯಾಮ್: ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಬ್ಯಾಡ್ಮಿಂಟನ್ ಮಿಶ್ರ ತಂಡ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಪಿವಿ ಸಿಂಧು 21-7, 2-16 ಸೆಟ್ ಗಳಿಂದ ಪಾಕಿಸ್ತಾನದ ಮಹೂರ್ ಶಹಜಾದ್ ಅವರನ್ನು ಸೋಲಿಸಿದರು. ಜೊತೆಗೆ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಹಾಗೂ ಅಶ್ವಿನಿ ಪೊನ್ನಪ್ಪ ಮತ್ತು ರೆಡ್ಡಿ ಜೋಡಿ ಡಬಲ್ಸ್ ವಿಭಾಗದಲ್ಲಿ ಗೆದ್ದು ಶುಭಾರಂಭ ಮಾಡಿದರು. ಭಾರತೀಯರು ಸುಲಭ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಸಯೀದ್ ಭಟ್ಟಿ ಮತ್ತು ಗಜ್ಲಾ ಸಿದ್ದಿಕಿ ಅವರನ್ನು 21-8, 21-12 ಅಂತರದಿಂದ ಸೋಲಿಸಿದರು. ಇದರ ನಂತರ, ಮುರಾದ್ ಅಲಿ ಅವರು ಶ್ರೀಕಾಂತ್ ಕೈಯಲ್ಲಿ 21-7, 21-12 ಸೋಲು ಅನುಭವಿಸಿದರು.
ಈ ಕುರಿತು ಅನುಭವ ಹಂಚಿಕೊಂಡ ಶ್ರೀಕಾಂತ್, ಇಂತಹ ದೊಡ್ಡ ಪಂದ್ಯಗಳನ್ನ ಉತ್ತಮವಾಗಿ ಪ್ರಾರಂಭಿಸುವುದು ಮುಖ್ಯ. ಇಲ್ಲಿ ಮೊದಲ ಪಂದ್ಯ ಆಡುತ್ತಿರುವುದರಿಂದ ಆರಂಭದಲ್ಲಿ ಕೊಂಚ ಟೆನ್ಶನ್ ಆಗಿತ್ತು. ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ, ದೈಹಿಕವಾಗಿ ನಾನು ಚೆನ್ನಾಗಿದ್ದೇನೆ. ಒತ್ತಡದ ಕ್ಷಣಗಳು ಯಾವಾಗಲೂ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕಾಮನ್ವೆಲ್ತ್ 2022 ಮಹಿಳಾ ಹಾಕಿ: ಘಾನಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ..