ಹ್ಯಾಂಗ್ಜೌ (ಚೀನಾ): ಭಾರತದ ಮಹಿಳಾ ಹಾಕಿ ತಂಡವು ಇಂದು ಸಿಂಗಾಪುರ ವಿರುದ್ಧದ ನಡೆದ ಆರಂಭಿಕ ಪಂದ್ಯದಲ್ಲೇ ಬೃಹತ್ ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಮೂಲಕ ಹ್ಯಾಂಗ್ಜೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಅದ್ಭುತ ಅಭಿಯಾನ ಆರಂಭಿಸಿದೆ. ಪಂದ್ಯ ಎಲ್ಲಾ ನಾಲ್ಕು ಕ್ವಾರ್ಟರ್ಗಳ ಕೊನೆಯಲ್ಲಿ ಸಿಂಗಾಪುರ ವಿರುದ್ಧ ಗೋಲ್ಗಳ ಮಳೆ ಸುರಿಸಿದ ಭಾರತ 13-0 ಅಂತರದಲ್ಲಿ ಜಯ ಸಾಧಿಸಿತು.
ಉತ್ತಮ ಕೌಶಲ್ಯ ಹಾಗೂ ಚುರುಕಿನ ಕಾಲ್ಚಳಕದಿಂದ ಗೋಲ್ ಹೊಡೆಯುವ ಮೂಲಕ ಪಂದ್ಯದ ಆರಂಭದಿಂದಲೂ ಭಾರತದ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ತೋರಿದರು. ಸಂಗೀತಾ ಕುಮಾರಿ ಹ್ಯಾಟ್ರಿಕ್ ಗೋಲು ದಾಖಲಿಸಿದರು.
ಆಟದ ಆರಂಭದಿಂದಲೇ ಪಾರಮ್ಯ ಮೆರೆದ ಭಾರತೀಯರು 6ನೇ ನಿಮಿಷಕ್ಕೆ ಗೋಲ್ ಖಾತೆ ತೆರೆದರು. ಉದಿತಾ ಅವರು ಚೆಂಡನ್ನು ಗೋಲ್ಪೋಸ್ಟ್ ಸೇರಿಸುವಲ್ಲಿ ಯಶಸ್ವಿಯಾದರು. 8ನೇ ನಿಮಿಷಕ್ಕೆ ಸುಶೀಲಾ ಚಾನು ಎರಡನೇ ಗೋಲ್ ಗಳಿಸುವ ಮೂಲಕ ಆಟ ಮುಂದುವರಿಸಿದರು. ಮತ್ತೆ ಮೂರು ನಿಮಿಷಕ್ಕೆ ದೀಪಿಕಾ ಮತ್ತೊಂದು ಗೋಲ್ ಸಾಧಿಸುವ ಮೂಲಕ ತಂಡ 3-0ರ ಮುನ್ನಡೆ ಪಡೆಯಿತು. ಮೊದಲ ಕ್ವಾರ್ಟರ್ ಅಂತ್ಯದ ವೇಳೆ ನವನೀತ್ ಕೌರ್2 ಗೋಲ್ ಗಳಿಸಿದ್ದು, ಭಾರತದ ಸ್ಕೋರ್ಲೈನ್ 5-0 ತಲುಪಿತ್ತು. ಈ ಮೂಲಕ ಅದ್ಭುತ ಆಟ ಪ್ರಾರಂಭಿಸಿದ ಭಾರತ, ಆಟ ಮುಂದುವರಿದಂತೆ ಗೋಲ್ಗಳ ಅಂತರವನ್ನು ಹೆಚ್ಚಿಸುತ್ತಲೇ ಸಾಗಿತು.
ಎರಡನೇ ಕ್ವಾರ್ಟರ್ನಲ್ಲಿ ಆಟಗಾರ್ತಿ ದೀಪ್ ಗ್ರೇಸ್ ಎಕ್ಕಾ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲ್ ಆಗಿ ಪರಿವರ್ತಿಸಿದರೆ, ನೇಹಾ ಹಾಗೂ ಸಂಗೀತಾ ಕುಮಾರಿ ಕೂಡ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಗೀತಾ ಕುಮಾರಿ ಎರಡು ಗೋಲ್ಗಳನ್ನು ಗಳಿಸಿದರೆ, ವಂದನಾ ಕಟಾರಿಯಾ ಹಾಗೂ ಮೋನಿಕಾ ಕೂಡ ತಲಾ ಒಂದೊಂದು ಗೋಲ್ ಗಳಿಸಿದರು. ಪಂದ್ಯ ಅಂತ್ಯದ ವೇಳೆ ಭಾರತದ ಖಾತೆಯಲ್ಲಿ 13 ಗೋಲ್ಗಳು ಸೇರ್ಪಡೆಗೊಂಡು ಸಿಂಗಾಪುರದ ತಂಡ ಹೀನಾಯವಾಗಿ ಸೋಲು ಕಂಡಿತು.
ಸಿಂಗಾಪುರದ ವಿರುದ್ಧ ಅಮೋಘ ಗೆಲುವು ಸಾಧಿಸಿದ ನಂತರ ಭಾರತದ ತಂಡ ಗ್ರೂಪ್ ಫಿಕ್ಸ್ಚರ್ನಲ್ಲಿ ಅಗ್ರಸ್ಥಾನಕ್ಕೆ ಬಂದಿದ್ದು, ಮುಂದಿನ ಮಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಭಾರತದ ಸುಲಭವಾಗಿ ಟೂರ್ನಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಹೊಂದಿದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್: 50 ಮೀಟರ್ ರೈಫಲ್ನಲ್ಲಿ ಸಿಫ್ಟ್ ಕೌರ್ ಸಮ್ರಾಗೆ ವಿಶ್ವದಾಖಲೆಯ ಚಿನ್ನ; ಆಶಿ ಚೌಕ್ಸೆಗೆ ಕಂಚು