ಚೆನ್ನೈ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪ್ರಸಿದ್ಧ ಚೆಸ್ ಕ್ರೀಡಾಪಟು ಕೊನೆರು ಹಂಪಿ ಹೆಸರನ್ನು ಆಲ್ ಇಂಡಿಯಾ ಚೆಸ್ ಫೆಡರೇಶನ್ ಶಿಫಾರಸು ಮಾಡಿದೆ. ಭಾರತದ ಈ ಚೆಸ್ ಆಟಗಾರ್ತಿ 2019ರ ಮಹಿಳೆಯರ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಆಗಿದ್ದರು.
ಭಾರತ ಕಂಡಿರುವ ಶ್ರೇಷ್ಠ ಚದುರಂಗದಾಟಗಾರ್ತಿ ಕೊನೆರು ಹಂಪಿ ಸದ್ಯ ವಿಶ್ವದ ಚೆಸ್ ಶ್ರೇಯಾಂಕದಲ್ಲಿ 3ನೇ ಸ್ಥಾನ ಹೊಂದಿದ್ದಾರೆ. ಈಗಾಗಲೇ ಮುಂದಿನ ವರ್ಷ ನಡೆಯಲಿರುವ FIDE ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಗೂ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ 'ಅರ್ಜುನ ಪ್ರಶಸ್ತಿ' ಹಾಗೂ 'ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, 2020ರಲ್ಲಿ ನಡೆದಿದ್ದ ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ತಂಡದಲ್ಲಿ ಹಂಪಿ ಇದ್ದರು.
ಇದನ್ನೂ ಓದಿರಿ: ಚದುರಂಗದ ಚತುರೆ ಕೊನೆರು ಹಂಪಿ... ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಇವರ ಜತೆಗೆ ವಿದಿತ್ ಎಸ್.ಗುಜರಾತಿ, ಬಿ.ಅಧಿಬನ್, ಎಸ್.ಪಿ.ಸೇತುರಾಮನ್, ಎಂ.ಆರ್.ಲಲಿತ್ ಬಾಬು, ಭಕ್ತಿ ಕುಲಕರ್ಣಿ ಮತ್ತು ಪದ್ಮಿನಿ ರೂಟ್ ಅವರ ಹೆಸರುಗಳನ್ನು 'ಅರ್ಜುನ ಪ್ರಶಸ್ತಿ'ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಎಐಸಿಎಫ್ ಗೌರವ ಕಾರ್ಯದರ್ಶಿ ಭಾರತ್ ಸಿಂಗ್ ಚೌಹಾನ್ ತಿಳಿಸಿದ್ದಾರೆ.
ಈಗಾಗಲೇ ಬಿಸಿಸಿಐನಿಂದ ಮಿಥಾಲಿ ರಾಜ್ ಹಾಗೂ ಆರ್.ಅಶ್ವಿನ್ ಹೆಸರನ್ನು ಖೇಲ್ ರತ್ನಕ್ಕೂ ಹಾಗೂ ಅರ್ಜುನ್ ಪ್ರಶಸ್ತಿಗೆ ಕ್ರಿಕೆಟಿಗರಾದ ಶಿಖರ್ ಧವನ್, ಕೆ.ಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ಹೆಸರನ್ನು ಶಿಫಾರಸು ಮಾಡಲಾಗಿದೆ. ಫುಟ್ಬಾಲ್ ಸಮಿತಿಯಿಂದ ಸುನಿಲ್ ಛೆಟ್ರಿ ಹೆಸರು ನಾಮನಿರ್ದೇಶನವಾಗಿದೆ.