ನವದೆಹಲಿ: 2020 ಟೋಕಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತರಾಗಿರುವ ಸಾಯ್ಖೋಮ್ ಮೀರಾಬಾಯಿ ಚನು 2022ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆಲ್ಲುವುದು ಮುಂದಿನ ಗುರಿ ಮತ್ತು ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಮೀರಾಬಾಯಿ 49 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ 2 ದಶಕಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕ ತಂದುಕೊಟ್ಟಿದ್ದರು. ಇದೀಗ ತವರಿಗೆ ಮರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಅವರು 2020ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ತಮ್ಮೆಲ್ಲಾ ಗಮನ ಹರಿಸಿದ್ದಾರೆ. ಪ್ರಸ್ತುತ ಅವರಿಗೆ ಅದೊಂದು ಪದಕ ಮಾತ್ರ ಅವರ ಬತ್ತಳಿಕೆ ಸೇರಿಲ್ಲ.
ವೇಟ್ಲಿಫ್ಟಿಂಗ್ನಲ್ಲಿ ಪದಕ ಬಂದಿಲ್ಲದ ಏಷ್ಯನ್ ಗೇಮ್ಸ್ ನನ್ನ ಮುಂದಿನ ಟಾರ್ಗೆಟ್. ಭಾರತಕ್ಕೆ 2022ರ ಏಷ್ಯನ್ ಗೇಮ್ಸ್ನಲ್ಲಿ ಪದಕ ತಂದುಕೊಡಲು ನಾನು ನನ್ನಿಂದಾಗುವ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಎಂದು ಆಮ್ವೇ ನ್ಯೂಟ್ರಿಲೈಟ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಯ್ಕೆಯಾದ ನಂತರ ನಡೆದ ವರ್ಚುಯಲ್ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ಏಷ್ಯನ್ ಗೇಮ್ಸ್ನ ನಂತರ 2024 ರ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕವನ್ನು ಚಿನ್ನವಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ ಎಂದು ಚನು ಹೇಳಿದ್ದಾರೆ. ಚನು 2014 ಮತ್ತು 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದರ ಮಧ್ಯೆ 2017ರ ವಿಶ್ವಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದರು. 2020ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿರುವ ಅವರಿಗೆ ಏಷ್ಯನ್ ಗೇಮ್ಸ್ ಪದಕ ಮಾತ್ರ ಇನ್ನೂ ಗೆಲ್ಲಲಾಗಿಲ್ಲ. 2018ರ ಆವೃತ್ತಿಯಲ್ಲಿ ಬೆನ್ನು ನೋವಿನ ಕಾರಣ ಕ್ರೀಡಾಕೂಟದಿಂದ ಹೊರ ಬಂದಿದ್ದರು.