ಚಂಡೀಘಡ: ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಭಾರತ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ (ಸೀನಿಯರ್) ಅವರ ಅಂತ್ಯಕ್ರಿಯೆಯನ್ನು ಚಂಡೀಘಡದ 25ನೇ ಸೆಕ್ಟರ್ನ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿದೆ.
ಭಾರತದ ಹಾಕಿ ಇತಿಹಾಸದಲ್ಲಿ ಧ್ಯಾನ್ ಚಂದ್ ನಂತರ ಹೆಚ್ಚು ಪ್ರಸಿದ್ಧರಾಗಿರುವ ಬಲ್ಬೀರ್ ಸಿಂಗ್ ದೇಶಕ್ಕೆ 1948, 1952 ಹಾಗೂ 1956ರ ಒಲಿಂಪಿಕ್ನಲ್ಲಿ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1952ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೆದರ್ಲೆಂಡ್ ವಿರುದ್ಧ ಐದು ಗೋಲು ಬಾರಿಸಿ ಭಾರತವನ್ನು 6-1ರಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದೇಶಕ್ಕೆ ಇಂತಹ ಕೊಡುಗೆ ನೀಡಿರುವ ಹಾಕಿ ಲೆಜೆಂಡ್ ಹೆಸರನ್ನು ಮೊಹಾಲಿ ಹಾಕಿ ಸ್ಟೇಡಿಯಂಗೆ ಇಡಲಾಗುವುದು ಎಂದು ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮೀತ್ ಸಿಂಗ್ ಸೋಧಿ ಹೇಳಿದ್ದಾರೆ. ಬಲ್ಬೀರ್ ಅವರ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ವೇಳೆ ಈ ಮಾಹಿತಿ ನೀಡಿದ್ದಾರೆ.
ಭಾರತ ಹಾಕಿ ಲೆಜೆಂಡ್ ಬಲ್ಬೀರ್ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಕ್ರೀಡೆ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.