ಲಂಡನ್: ಕೋವಿಡ್ ಸೋಂಕಿಗೆ ತುತ್ತಾದ ಮ್ಯಾಂಚೆಸ್ಟರ್ ಸಿಟಿ ತಂಡದ ಐವರು ಆಟಗಾರರು ಕ್ವಾರಂಟೈನ್ ಆಗಿದ್ದು, ಚೆಲ್ಸಿಯಾ ವಿರುದ್ಧದ ಪಂದ್ಯಕ್ಕೆ ಲಭ್ಯರಿರುವುದಿಲ್ಲ ಎಂದು ತಂಡದ ವ್ಯವಸ್ಥಾಪಕ ಪೆಪ್ ಗಾರ್ಡಿಯೊಲಾ ಹೇಳಿದ್ದಾರೆ.
ಕೋವಿಡ್ ಕಾರಣದಿಂದಾಗಿ ಪ್ರೀಮಿಯರ್ ಲೀಗ್ ಪಂದ್ಯವನ್ನು ಮುಂದೂಡಿದ್ದ ನಂತರ ತರಬೇತಿ ನಿಲ್ಲಿಸಿದ್ದ ಆಟಗಾರರು ಭಾನುವಾರದಂದು ನಡೆಯಲಿರುವ ಪಂದ್ಯಕ್ಕಾಗಿ ಮತ್ತೆ ಮೈದಾನಕ್ಕಿಳಿದು ತರಬೇತಿ ಪ್ರಾರಂಭಿಸಿದ್ದಾರೆ.
ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಫಾರ್ವರ್ಡ್ ಆಟಗಾರ ಗೇಬ್ರಿಯಲ್ ಜೀಸಸ್ ಮತ್ತು ಡಿಫೆಂಡರ್ ಕೈಲ್ ವಾಕರ್ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ.
ಇತ್ತ ಚೆಲ್ಸಿಯಾ ಕ್ಲಬ್‌ನ ಕೆಲ ಸಿಬ್ಬಂದಿಗೆ ಸೋಂಕು ತಗುಲಿದ್ದು, ಯಾವುದೇ ಆಟಗಾರರು ಸೋಂಕಿಗೆ ತುತ್ತಾಗಿಲ್ಲ ಎಂದು ಚೆಲ್ಸಿಯಾ ವ್ಯವಸ್ಥಾಪಕ ಫ್ರಾಂಕ್ ಲ್ಯಾಂಪಾರ್ಡ್ ಹೇಳಿದ್ದಾರೆ.
ದೇಶದಲ್ಲಿ ರೂಪಾತಂರ ಕೋವಿಡ್-19 ಸೋಂಕು ಹರಡುವ ಭೀತಿ ಇದ್ದರೂ ಸ್ಪರ್ಧೆಯನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಪ್ರೀಮಿಯರ್ ಲೀಗ್ ಹೇಳಿದೆ.