ನವದೆಹಲಿ: ಭಾರತ ತಂಡಕ್ಕೆ ಸುನಿಲ್ ಚೆಟ್ರಿ ಅವರಂತಹ ಸಾಮರ್ಥ್ಯವುಳ್ಳ ಫುಟ್ಬಾಲ್ ಆಟಗಾರನಿಗಾಗಿ ನಿರಂತರವಾದ ಅನ್ವೇಷಣೆ ಅಗತ್ಯವಾಗಿ ಬೇಕಾಗಿದೆ ಎಂದು ಭಾರತ ತಂಡದ ಫುಟ್ಬಾಲ್ ಕೋಚ್ ಷಣ್ಮುಗನ್ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
35 ವರ್ಷದ ಆಟಗಾರ ಭಾರತ ತಂಡಕ್ಕೆ ಕಳೆದ 15 ವರ್ಷಗಳಿಂದ ಆಧಾರ ಸ್ತಂಭವಾಗಿದ್ದಾರೆ. ಸಾಕಷ್ಟು ಆಟಗಾರರಿಗೆ ನಿರಂತರ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಅವರು ಮಾದರಿಯಾಗಿ ನಿಂತಿದ್ದಾರೆ.
ಸ್ವತಃ ಭಾರತದ ಮಾಜಿ ನಾಯಕನಾಗಿದ್ದ ವೆಂಕಟೇಶ್, ಎಡ ಮತ್ತು ಬಲ ಕಾಲುಗಳೆರಡು ಕಾಲುಗಳು ಅನುಕೂಲಕರವಾಗಿರುವ ಕೆಲವೇ ಕೆಲವು ಉನ್ನತ ಫುಟ್ಬಾಲ್ ಆಟಗಾರರಲ್ಲಿ ಚೆಟ್ರಿ ಒಬ್ಬರು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
"ನಾವು ಒಟ್ಟಿಗೆ ಆಡಿದ್ದೇವೆ ಮತ್ತು ಸುನಿಲ್ ನನ್ನ ನಾಯಕತ್ವದಲ್ಲಿಯೂ ಆಡಿದ್ದಾರೆ. ಅವರ ಸೌಂದರ್ಯವೆಂದರೆ ಅವರು ಎರಡೂ ಪಾದಗಳು ಅವರಿಗೆ ಆರಾಮದಾಯಕವಾಗಿವೆ . ಬಹಳ ಸಮಯದ ನಂತರ ನಾನು ಅದನ್ನು ಗಮನಿಸಿದೆ" ಎಂದು ವೆಂಕಟೇಶ್ ಆಲ್ ಇಂಡಿಯನ್ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಇನ್ಸ್ಟಾಗ್ರಾಂ ಲೈವ್ ಸೆಷನ್ನಲ್ಲಿ ಹೇಳಿಕೊಂಡಿದ್ದಾರೆ.
"ಅವರು ತುಂಬಾ ಶ್ರಮವಹಿಸುತ್ತಾರೆ, ಅವರು ಉತ್ತಮ ಫುಟ್ಬಾಲ್ ಆಟಗಾರ ಮಾತ್ರವಲ್ಲದೇ ಅವಕಾಶಗಳನ್ನು ಸೃಷ್ಟಿಸುವ ಮತ್ತು ಮೂರು ಸ್ಥಾನಗಳಲ್ಲಿ ಆಡಬಲ್ಲ ಆಟಗಾರ" ಎಂದು ಚೆಟ್ರಿಯನ್ನು ಹಾಡಿ ಹೊಗಳಿದ್ದಾರೆ.
ಚೆಟ್ರಿ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲುಗಳಿಸಿರುವ ಸಕ್ರಿಯ ಆಟಗಾರರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಚೆಟ್ರಿ 115 ಪಂದ್ಯಗಳಿಂದ 72 ಗೋಲುಗಳಿಸಿ ರೊನಾಲ್ಡೊ ನಂತರದ ಸ್ಥಾನ ಪಡೆದಿದ್ದಾರೆ. ರೊನಾಲ್ಡೋ 164 ಪಂದ್ಯಗಳಲ್ಲಿ 99 ಗೋಲುಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಲಿಯೋನೆಲ್ ಮೆಸ್ಸಿ 138 ಪಂದ್ಯಗಳಿಂದ 70 ಗೋಲುಗಳಿಸಿದ್ದಾರೆ.