ಮನಾಮ(ಬೆಹ್ರೈನ್): ಭಾನುವಾರ ಹಮದ್ ಟೌನ್ ಸ್ಟೇಡಿಯಂನಲ್ಲಿ ನಡೆದ ಬೆಹ್ರೈನ್ ವಿರುದ್ದದ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ ಮಹಿಳಾ ಫುಟ್ಬಾಲ್ ತಂಡ 5-0 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ.
ಥಾಮಸ್ ಡೆನೆರ್ಬಿ ಕೋಚ್ನಲ್ಲಿ ಪಳಗುತ್ತಿರುವ ಭಾರತದ ವನಿತೆಯರ ತಂಡ ಕಳೆದ ಪಂದ್ಯದಲ್ಲಿ 0-1ರಲ್ಲಿ ತುನಿಷಿಯಾ ವಿರುದ್ಧ ಸೋಲು ಕಂಡಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿದೆ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸಂಗೀತಾ ಬಸ್ಫೋರ್ 13ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 19ನೇ ನಿಮಿಷ ಮತ್ತು 68 ನಿಮಿಷದಲ್ಲಿ ಪ್ಯಾರಿ ಕ್ಷಾಕ್ಷ, 34ನೇ ನಿಮಿಷದಲ್ಲಿ ಇಂದುಮತಿ ಕಥಿರೇಶನ್ ಹಾಗೂ ಮನಿಶಾ ಕಲ್ಯಾಣ್ 69ನೇ ನಿಮಿಷದಲ್ಲಿ ಗೋಲು ಸಿಡಿಸಿ ಭಾರತದ ದಿಗ್ವಿಜಯಕ್ಕೆ ಕಾರಣರಾದರು.
4ನೇ ನಿಮಿಷದಲ್ಲಿ ಅಂಜು ಅವರಿಗೆ ಮತ್ತು 11ನೇ ನಿಮಿಷದಲ್ಲಿ ಪ್ರಿಯಾ ಅವರಿಗೆ ಭಾರತ ತಂಡಕ್ಕಾಗಿ ಗೋಲು ಗಳಿಸುವ ಅವಕಾಶ ಸಿಕ್ಕಿತ್ತಾದಾದರು, ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಭಾರತೀಯ ಆಟಗಾರ್ತಿಯರು ಎಡವಿದರು. ಆದರೂ ಮೊದಲಾರ್ಧದಲ್ಲಿ 3-0ಯಲ್ಲಿ ಲೀಡ್ ಪಡೆದುಕೊಂಡ ಆಶಾಲತಾ ಬಳಗ ದ್ವಿತೀಯಾರ್ಧದಲ್ಲಿ ಮತ್ತೆರಡು ಗೋಲು ಸಿಡಿಸಿದರು.
ಮುಂದಿನ ಸೌಹಾರ್ಧ ಪಂದ್ಯದಲ್ಲಿ ಭಾರತ ತಮಡವು ಚೈನೀಸ್ ತೈಪೆ ವಿರುದ್ಧ ಬುಧವಾರ ಕಣಕ್ಕಿಳಿಯಲಿದೆ.
ಇದನ್ನೂ ಓದಿ:M.S.Dhoni: ರೋಮಾಂಚಕ ಬ್ಯಾಟಿಂಗ್ ಬಳಿಕ ಪುಟ್ಟ ಅಭಿಮಾನಿಗೆ ಬಾಲ್ ಗಿಫ್ಟ್ ಮಾಡಿದ ಧೋನಿ