ಬ್ಯೂನಸ್ (ಅರ್ಜೆಂಟೀನಾ): ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಫುಟ್ಬಾಲ್ ದಿಗ್ಗಜ ಡಿಗೊ ಮರಡೋನಾ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
60 ವರ್ಷದ ಮಾಜಿ ಫುಟ್ಬಾಲ್ ಆಟಗಾರರನ್ನು ಆ್ಯಂಬುಲೆನ್ಸ್ ಮೂಲಕ ಬ್ಯೂನಸ್‌ನಲ್ಲಿರುವ ಒಲಿವೊಸ್ ಕ್ಲಿನಿಕ್‌ನಿಂದ ಹೊರಟು ನಗರದ ಉತ್ತರದ ಹೊರವಲಯದಲ್ಲಿರುವ ಟೈಗ್ರೆ ಎಂಬಲ್ಲಿನ ಮನೆಗೆ ಕರೆದೊಯ್ಯಲಾಯಿತು.
ಇದಕ್ಕೂ ಮೊದಲು, ಅವರ ವಕೀಲ ಮಾಟಿಯಾಸ್ ಮೊರ್ಲಾ, "ಬಹುಶಃ ಮರಡೋನಾ ಅವರು ತಮ್ಮ ಜೀವನದ ಕಠಿಣ ಸಮಯವನ್ನು" ದಾಟಿದ ನಂತರ ಉತ್ತಮವಾಗಿದ್ದಾರೆ ಎಂದು ಹೇಳಿದರು. ಈಗ ಅವರಿಗೆ ಬೇಕಾಗಿರುವುದು ಕುಟುಂಬ ಮತ್ತು ಉತ್ತಮ ಆರೋಗ್ಯ ವೃತ್ತಿಪರ ಆರೈಕೆ ಎಂದಿದ್ದರು.
'ಹಿಂದೆ ಆಗಿರುವ ಅಪಘಾತವೊಂದರಿಂದ ಮರಡೋನಾ ಅವರ ಮೆದುಳಿಗೆ ಸಮಸ್ಯೆಯಾಗಿರುವ ಸಾಧ್ಯತೆಯಿದೆ' ಎಂದು ಅವರ ಕುಟುಂಬದ ವೈದ್ಯರು ತಿಳಿಸಿದ್ದರು. ಆದರೆ ಮರಡೋನಾ, ನನಗೆ ಅಂತಹ ಯಾವುದೇ ಘಟನೆ ನೆನಪಿಲ್ಲ ಎಂದು ಹೇಳಿದ್ದರು.
ಮರಡೋನಾ ನಾಯಕತ್ವದ ತಂಡ ಮೆಕ್ಸಿಕೊದಲ್ಲಿ ನಡೆದ1986ರ ವಿಶ್ವಕಪ್ ಟೂರ್ನಿಯಲ್ಲಿ ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.