ಕ್ರೈಸ್ಟ್ಚರ್ಚ್: ಶೆಫಾಲಿ ವರ್ಮಾ, ರಿಚಾ ಘೋಷ್ ಅಂತಹ ಯುವ ಆಟಗಾರ್ತಿಯರು ದೊಡ್ಡ ಮಟ್ಟದಲ್ಲಿ ಆಡುವುದಕ್ಕೆ ತಾವೂ ಸಮರ್ಥರು ಎಂಬುದನ್ನು ಈಗಾಗಲೇ ತಮ್ಮ ಸಾಮರ್ಥ್ಯದ ಮೂಲಕ ಸಾಬೀತುಪಡಿಸಿದ್ದಾರೆ. ವಿಶ್ವಕಪ್ಗೂ ಮುನ್ನ ನಡೆದ ಕೆಲವು ಸರಣಿಗಳು ತಂಡದ ಸಂಯೋಜನೆಗೆ ನೆರವಾಗಿದೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ಭಾರತ ಮಾರ್ಚ್ 4ರಿಂದ ಕಿವೀಸ್ನಲ್ಲಿ ಆರಂಭವಾಗಲಿರುವ ವಿಶ್ವಕಪ್ಗೂ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಳಲ್ಲಿ ಕೆಲವು ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವು ಆಟಗಾರ್ತಿಯರು ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದು, ವಿಶ್ವಕಪ್ಗೂ ಮುನ್ನ ಭಾರತ ತಂಡಕ್ಕೆ ಬಲವನ್ನು ತಂದಿದೆ.
ಅವರೆಲ್ಲರಿಗೂ ಒಳ್ಳೆಯ ಆವಕಾಶಗಳನ್ನು ನೀಡಲಾಗಿದೆ ಮತ್ತು ಆ ಸರಣಿಗಳು ಯುವ ಆಟಗಾರ್ತಿಯರಿಗೆ ತುಂಬಾ ನೆರವಾಗಿದೆ. ನಾಯಕಿಯಾಗಿ ನಾನು ತಂಡದಲ್ಲಿ ಅವರಿಗೆ ಯಾವ ಕ್ರಮಾಂಕ ಸೂಕ್ತ ಎನ್ನುವುದನ್ನು ಹುಡುಕಬೇಕಿದೆ" ಎಂದು ಮಿಥಾಲಿ ರಾಜ್ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾವು ಕಳೆದ ಆವೃತ್ತಿಯಿಂದಲೂ ಒಳ್ಳೆಯ ಅನುಭವಿ ಗುಂಪನ್ನು ಹೊಂದಿದ್ದೇವೆ. ಮತ್ತು ಭಾರತ ತಂಡದಲ್ಲಿದ್ದ ಬಹುತೇಕರು, ಅದರಲ್ಲೂ ಯುವ ಆಟಗಾರ್ತಿಯರು ಹಲವಾರು ಲೀಗ್ಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅವುಗಳು ಅವರಿಗೆ ದ್ವಿಪಕ್ಷೀಯ ಸರಣಿಗಿಂತಲೂ ಹೆಚ್ಚಿನ ಮಾನ್ಯತೆಯನ್ನು ಒದಗಿಸಿಕೊಟ್ಟಿವೆ ಎಂದು ಹಿರಿಯ ಆಟಗಾರ್ತಿ ಹೇಳಿದ್ದಾರೆ.
ಮಾತು ಮುಂದುವರಿಸಿ, ನೀವು ವಿಶ್ವಕಪ್ನಂತಹ ಈವೆಂಟ್ಗೆ ತೆರಳುವಾಗ ಹೆಚ್ಚಾಗಿ ಒಂದೇ ವರ್ಗದವರ ಮೇಲೆ ಅವಲಂಬಿತರಾಗಿದ್ದರು, ಬದಲಾಗಿ ಯುವ ಆಟಗಾರರು ಮತ್ತು ಅನುಭವಿಗಳ ಮಿಶ್ರಣದಲ್ಲಿ ಹೋಗುವುದು ತಂಡಕ್ಕೆ ಅನುಕೂಲವಾಗಲಿದೆ. ಇನ್ನು ನಾನು ಕೂಡ ಉತ್ತಮ ರನ್ಗಳಿಸುತ್ತಿರುವುದರಿಂದ ತುಂಬಾ ಖುಷಿಯಿದೆ. ವಿಶ್ವಕಪ್ನಲ್ಲೂ ಇದನ್ನು ಮುಂದುವರಿಸಲು ನಾನು ಇಷ್ಟಪಡುತ್ತೇನೆ ಎಂದು ಟೀಮ್ ಇಂಡಿಯಾ ನಾಯಕಿ ತಿಳಿಸಿದ್ದಾರೆ.
ಭಾರತ ತಂಡ ಭಾನುವಾರ ದಕ್ರಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಮಂಗಳವಾರ ವಿಂಡೀಸ್ ವಿರುದ್ಧ 2ನೇ ಅಭ್ಯಾಸ ಪಂದ್ಯವನ್ನಾಡಲಿದೆ. ಮಾರ್ಚ್ 4ರಂದು ವಿಶ್ವಕಪ್ಗೆ ಚಾಲನೆ ದೊರೆಯಲಿದ್ದು, ಮೊದಲನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡಲಿವೆ. ಮಾರ್ಚ್ 6ರಂದು ಪಾಕಿಸ್ತಾನದ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ:ರಣಜಿ ಟ್ರೋಫಿ: ಮಗಳ ಅಂತ್ಯಕ್ರಿಯೆ ಮುಗಿಸಿ ಬಂದು ಶತಕ ಬಾರಿಸಿದ ಬರೋಡಾ ಕ್ರಿಕೆಟಿಗ