ಸೌತಾಂಪ್ಟನ್: ಎರಡು ವರ್ಷಗಳ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ಶುಕ್ರವಾರ ನಡೆಯಲಿದೆ. 9 ತಂಡಗಳ ಚಾಂಪಿಯನ್ಶಿಪ್ನಲ್ಲಿ ಅಗ್ರ ಎರಡು ತಂಗಳಾಗಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಚೊಚ್ಚಲ ಟ್ರೋಫಿಗಾಗಿ ನಾಳೆ ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ಸೆಣಸಾಡಲಿವೆ.
ಎರಡು ತಂಡಗಳಿಗೂ ಈ ಟ್ರೋಫಿ ಪ್ರಮುಖವಾಗಿದೆ. ಭಾರತ ತಂಡ ಗೆದ್ದರೆ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಇತ್ತ ನ್ಯೂಜಿಲ್ಯಾಂಡ್ಗೆ ಇದೇ ಮೊದಲ ಐಸಿಸಿ ಟ್ರೋಫಿಯಾಗಲಿದೆ.
ಭಾರತದ ಯಶಸ್ವಿ ನಾಯಕನಾಗಿರುವ ವಿರಾಟ್ ಕೊಹ್ಲಿ ಪ್ರಶಸ್ತಿ ಎತ್ತಿಹಿಡಿಯುತ್ತಾರೆ ಎಂದು ಶತಕೋಟಿ ಭಾರತೀಯರ ಕಾತುರದಿಂದ ಕಾಯುತ್ತಿದ್ದರೆ, ಬಲಿಷ್ಠ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ತನ್ನ ಮುಡೆಗೇರಿಸಿಕೊಳ್ಳಲು ಮೂಲಕ ಇತಿಹಾಸ ಬರೆಯಲು ಕೇನ್ ವಿಲಿಯಮ್ಸನ್ ಉತ್ಸಾಹ ಭರಿತರಾಗಿ ಕಾಯುತ್ತಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ನಡುವೆಯೂ 144 ವರ್ಷಗಳ ಇತಿಹಾಸವಿರುವ ಹಾಗೂ ಕ್ರಿಕೆಟ್‍ನ ಶ್ರೇಷ್ಠ ಮಾದರಿಯೆಂದೇ ಗುರುತಿಸಲ್ಪಡುವ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಭಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ನಡೆಯುತ್ತಿದೆ. ಇದಕ್ಕೆ ಕೇವಲ ಎರಡು ತಂಡ ಅಥವಾ ದೇಶಗಳಲ್ಲದೇ ಕ್ರಿಕೆಟ್ ಪ್ರೀತಿಸುವ ಹತ್ತಾರು ರಾಷ್ಟ್ರಗಳ ಅಭಿಮಾನಿಗಳು ಕೂಡ ಎದುರು ನೋಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೊಹ್ಲಿ ಶ್ರೇಷ್ಠ ಟೆಸ್ಟ್ ನಾಯಕನೆಂದು ಗುರುತಿಸಿಕೊಂಡಿದ್ದಾರೆ. ಆದರೆ, ಟ್ರೋಫಿ ವಿಷಯದಲ್ಲಿ ಒಂದು ದಶಕದಿಂದ ಅವರಿಗೆ ಕಹಿ ಅನುಭವಾಗಿದೆ. ಇದೀಗ ಟೆಸ್ಟ್ ಟ್ರೋಫಿ ಗೆಲ್ಲುವ ಮೂಲಕ ಧೋನಿಯಂತೆ ಭಾರತದ ಶ್ರೇಷ್ಠ ನಾಯಕನ ಸಾಲಿನಲ್ಲಿ ಕೊಹ್ಲಿ ನಿಲ್ಲಲ್ಲಿದ್ದಾರೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ 2007ರ ಟಿ-20 ಮತ್ತು 2011ರ ಏಕದಿನ ವಿಶ್ವಕಪ್ ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇದೀಗ ಕೊಹ್ಲಿಗೂ ಕೂಡ ಅಂತಹ ಅವಕಾಶ ಸಿಕ್ಕಿದೆ.
ಇತ್ತ ವಿಲಿಯಮ್ಸನ್ ಅತ್ಯುತ್ತಮ ಕ್ರಿಕೆಟಿಗರ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಥಿರತೆಯುಳ್ಳ ಆಟಗಾರರ ದಂಡನ್ನೇ ಹೊಂದಿದೆ. ಅಲ್ಲದೆ ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲೇ ಬಗ್ಗುಬಡಿದು 22 ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದ ವಿಶ್ವಾಸದಲ್ಲಿ ಸೌತಾಂಪ್ಟನ್ ಮೈದಾನಕ್ಕೆ ಹೆಜ್ಜೆ ಹಾಕಲಿದೆ.
ಪ್ರತಿಯೊಬ್ಬ ಕ್ರಿಕೆಟಿಗರೂ ಕೊಹ್ಲಿ ಮತ್ತು ವಿಲಿಯಮ್ಸನ್ ನಡುವಿನ ಕವರ್ ಡ್ರೈವ್, ಡಿವೋನ್ ಕಾನ್ವೆ ಮತ್ತು ಅಶ್ವಿನ್, ಕೊಹ್ಲಿ -ಜೆಮೀಸನ್ ಮತ್ತು ಬೌಲ್ಟ್ ಇನ್ಸ್ವಿಂಗ್ಗೆ ಹಿಟ್ಮ್ಯಾನ್ ರೋಹಿತ್ ಹೇಗೆ ಉತ್ತರಿಸಲಿದ್ದಾರೆ ಎಂಬುದನ್ನು ನೋಡಲು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ನೀಲ್ ವ್ಯಾಗ್ನರ್ ಮತ್ತು ಸೌಥಿ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಮತ್ತು ರಹಾನೆಯನ್ನು ಕೆಣಕಲು ಸಿದ್ಧರಾಗಿದ್ದಾರೆ.
WTC ಇವರ ಪಾಲಿನ ವಿಶ್ವಕಪ್
ಸೀಮಿತ ಓವರ್ಗಳ ಕ್ರಿಕೆಟ್ಗೆ ಮರಳುವುದು ಅಸಾಧ್ಯವಾಗಿರುವ ರವಿಚಂದ್ರನ್ ಅಶ್ವಿನ್, ಪೂಜಾರ, ರಹಾನೆ , ಇಶಾಂತ್ ಶರ್ಮಾ, ವಿಹಾರಿ ಮತ್ತು ಉಮೇಶ್ ಯಾದವ್ ಹಾಗೂ ಕಿವೀಸ್ನ ಬಿಜೆ ವಾಟ್ಲಿಂಗ್, ನೀಲ್ ವ್ಯಾಗ್ನರ್ ಅಂತಹ ಕ್ರಿಕೆಟಿಗರಿಗೆ ಇದೇ ವಿಶ್ವಕಪ್ ಆಗಲಿದೆ.
ಮುಖಾಮುಖಿ
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಒಟ್ಟು 59 ಟೆಸ್ಟ್ ಪಂದ್ಯಗಳನ್ನಾಡಿದ್ದು, ಭಾರತ 21 ಹಾಗೂ ನ್ಯೂಜಿಲ್ಯಾಂಡ್ 12 ಪಂದ್ಯಗಳನ್ನು ಗೆದ್ದಿದೆ. 26 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ದಾಖಲೆ
ಭಾರತ WTCಯಲ್ಲಿ 17 ಪಂದ್ಯಗಳನ್ನಾಡಿದ್ದು, 12 ಜಯ 4 ಸೋಲು ಮತ್ತು ಒಂದು ಡ್ರಾ ಸಾಧಿಸಿದೆ. ನ್ಯೂಜಿಲ್ಯಾಂಡ್ 11 ಪಂದ್ಯಗಳನ್ನಾಡಿದ್ದು 8 ಜಯ ಮತ್ತು 4 ಪಂದ್ಯಗಳಲ್ಲಿ ಸೋಲು ಕಂಡಿದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹನುಮಾ ವಿಹಾರಿ, ವೃದ್ಧಿಮಾನ್ ಸಹಾ (ವಿಕೀ).
ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್ ಮತ್ತು ವಿಲ್ ಯಂಗ್
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟ್ರೈಕ್ರೇಟ್ ಸಂಪೂರ್ಣ ಅಸಂಬದ್ಧ ಎಂದು ಪೂಜಾರ ತೋರಿಸಿಕೊಟ್ಟಿದ್ದಾರೆ: ದಿನೇಶ್ ಕಾರ್ತಿಕ್
ಇದನ್ನು ಓದಿ:WTC ಫೈನಲ್ನಲ್ಲಿ ಪಂತ್ ಆಟ ನೋಡಲು ಎದುರು ನೋಡುತ್ತಿದ್ದೇನೆ: ಆಸೀಸ್ ಲೆಜೆಂಡ್ ಕಾತರ