ಹ್ಯಾಮಿಲ್ಟನ್: ಮಗುವಿಗೆ ಜನ್ಮ ನೀಡಿದ 6 ತಿಂಗಳಲ್ಲಿ ಮೈದಾನಕ್ಕಿಳಿದು ಕ್ರಿಕೆಟ್ ಆಡುತ್ತಿರುವ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್ ಮಹಿಳಾ ಕ್ರಿಕೆಟಿಗರಿಗೆ ಸ್ಪೂರ್ತಿ ಎಂದು ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಶ್ಲಾಘಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 107ರನ್ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಈ ಪಂದ್ಯ ಮುಗಿಯುತ್ತಿದ್ದಂತೆ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಸೇರಿದಂತೆ ಭಾರತ ತಂಡದ ಆಟಗಾರ್ತಿಯರು ಪಾಕಿಸ್ತಾನ ನಾಯಕಿ ಬಿಸ್ಮಾ ಮರೂಫ್ ಮಗಳಾದ ಫಾತಿಮಾ ಜೊತೆ ಕೆಲವು ಸಮಯ ಕಳೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿತ್ತು.
"ಮಗುವಿಗೆ ಜನ್ಮನೀಡಿದ ಕೇವಲ 6 ತಿಂಗಳಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವುದು ಸ್ಪೂರ್ತಿದಾಯಕವಾಗಿದೆ. ಬಿಸ್ಮಾ ಮರೂಫ್ ವಿಶ್ವದಾದ್ಯಂತ ಮಹಿಳಾ ಕ್ರೀಡಾಪಟುಗಳಿಗೆ ಉದಾಹರಣೆಯಾಗಿದ್ದಾರೆ. ಭಾರತದಿಂದ ಬೇಬಿ ಫಾತಿಮಾ ಮೇಲೆ ಸಾಕಷ್ಟು ಪ್ರೀತಿಯಿದೆ. ಅವಳೂ ಕೂಡ ನಿಮ್ಮಂತೆಯೇ ಬ್ಯಾಟ್ ಹಿಡಿಯಲಿದ್ದಾಳೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಎಡಚರು ತುಂಬಾ ವಿಶೇಷರು" ಎಂದು ಮಂಧಾನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ ನಡೆದ ಉಭಯ ದೇಶಗಳ ನಡುವಿನ ಪಂದ್ಯದಲ್ಲಿ ಭಾರತ ತಂಡ 245 ರನ್ಗಳಿಸಿತ್ತು. ಆದರೆ ಪಾಕಿಸ್ತಾನ ತಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (4 ವಿಕೆಟ್) ದಾಳಿಗೆ ಸಿಲುಕಿ ಇನ್ನೂ 7 ಓವರ್ಗಳಿರುವಾಗಲೇ 137ಕ್ಕೆ ಆಲೌಟ್ ಆಗಿತ್ತು.
ಇದನ್ನೂ ಓದಿ:ರೋಹಿತ್ ಶರ್ಮಾ ನಾಯಕತ್ವಕ್ಕೆ 10ಕ್ಕೆ 9.5 ಅಂಕ ನೀಡುವೆ: ಗವಾಸ್ಕರ್