ನವದೆಹಲಿ: ಆತಿಥೇಯ ಇಂಗ್ಲೆಂಡ್ ವಿರುದ್ಧದ ಸಿಮೀತ ಓವರ್ಗಳ ಕ್ರಿಕೆಟ್ ಸರಣಿ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಕೆರಿಬಿಯನ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಸರಣಿಗೋಸ್ಕರ ಟೀಂ ಇಂಡಿಯಾದ ಕೆಲ ಹಿರಿಯ ಪ್ಲೇಯರ್ಸ್ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಈ ತಿಂಗಳ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಂಟು ಎಂಟು ಪಂದ್ಯಗಳ ಸರಣಿ ನಡೆಯಲಿದ್ದು, ಅದರಲ್ಲಿ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳು ಸೇರಿಕೊಂಡಿವೆ. ಈ ಸರಣಿಗೋಸ್ಕರ ಟೀಂ ಇಂಡಿಯಾದ ಹಿರಿಯ ಪ್ಲೇಯರ್ಸ್ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿಯಿಂದ ಯಾರೆಲ್ಲ ಹೊರಗುಳಿಯಲಿದ್ದಾರೆ ಎಂಬುದು ಇನ್ನೂ ಫೈನಲ್ ಆಗದ ಕಾರಣ ತಂಡ ಅಂತಿಮಗೊಳಿಸಿಲ್ಲ.
ಜುಲೈ 22ರಿಂದ ಆಗಸ್ಟ್ 7ರ ಮಧ್ಯೆ ಉಭಯ ತಂಡಗಳ ಮಧ್ಯೆ ಕ್ರಿಕೆಟ್ ಸರಣಿ ನಡೆಯಲಿವೆ. ಮುಖ್ಯವಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಸೇರಿದಂತೆ ಪ್ರಮುಖ ಹಿರಿಯ ಪ್ಲೇಯರ್ಸ್ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಕೆರಿಬಿಯನ್ ವಿರುದ್ಧದ ತಂಡ ಘೋಷಣೆ ಮಾಡುವ ಉದ್ದೇಶದಿಂದಲೇ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಇಂಗ್ಲೆಂಡ್ನಲ್ಲಿದ್ದು, ಎಡ್ಜ್ಬಾಸ್ಟನ್ ಟೆಸ್ಟ್ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಸೇರಿದಂತೆ ಇತರೆ ಆಟಗಾರರೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಟೆಸ್ಟ್ ಸೋಲಿನ ಬೆನ್ನಲ್ಲೇ ಬರೆ: ಭಾರತಕ್ಕೆ ಶೇ.40ರಷ್ಟು ದಂಡ; ಎರಡು ಪಾಯಿಂಟ್ ಕಡಿತ
ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಕಡಿಮೆ ಅವಧಿಯಲ್ಲಿ ಅನೇಕ ನಾಯಕರೊಂದಿಗೆ ಕೆಲಸ ಮಾಡಬೇಕಾಗಿರುವ ಕಾರಣ, ಆಯ್ಕೆದಾರರು ಮತ್ತೊಮ್ಮೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಆಲೋಚನೆ ಇದೆ ಎಂದು ತಿಳಿದು ಬಂದಿದೆ.