ಹೈದರಾಬಾದ್ (ತೆಲಂಗಾಣ): ಶನಿವಾರ ನಡೆದ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸುವ ಮೂಲಕ ಭಾರತ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿತು. ವಿಶ್ವಕಪ್ಗೂ ಒಂದು ತಿಂಗಳ ಮುನ್ನವೇ ಭಾರತ ಏಷ್ಯಾಕಪ್ನಲ್ಲಿ ಚಾಂಪಿಯನ್ ಆಗಿದ್ದಲ್ಲದೇ ಐಸಿಸಿ ಶ್ರೆಯಾಂಕದಲ್ಲಿ ನಂ.1 ಸ್ಥಾನಕ್ಕೇರಿ ಏಕದಿನ ಮಾದರಿಯಲ್ಲಿ ಬಲಿಷ್ಠ ತಂಡ ಎಂದೆನಿಸಿದೆ. ಇದೇ ಸಂದರ್ಭದಲ್ಲಿ 10 ವರ್ಷಗಳ ಐಸಿಸಿ ಟ್ರೋಫಿಯ ಬರ ಈ ಬಾರಿ ನೀಗಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.
ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಐದು ಬಾರಿಯ ವಿಶ್ವ ಚಾಂಪಿಯನ್ ಕಾಂಗರೂ ಪಡೆಯನ್ನು 199 ರನ್‌ಗಳಿಗೆ ನಿಯಂತ್ರಿಸಿ ಗೆದ್ದರೆ, ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 273 ರನ್ಗಳ ಗುರಿ ಭೇದಿಸಿ ಗೆಲುವು ದಾಖಲಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 191 ರನ್‌ಗಳಿಸಿ ನಿಯಂತ್ರಿಸಿದ್ದಲ್ಲದೇ 19 ಓವರ್‌ಗಳು ಬಾಕಿ ಇರುವಂತೆ ವಿಜಯಪತಾಕೆ ಹಾರಿಸಿತು.
ವಿಶ್ವಕಪ್ ಆರಂಭವಾಗುವ ಮುನ್ನವೇ ಜಾಗತಿಕ ಕ್ರಿಕೆಟ್ ದಿಗ್ಗಜರು ಟಾಪ್ ನಾಲ್ಕು ತಂಡಗಳಲ್ಲಿ ಭಾರತವನ್ನು ಹೆಸರಿಸಿದ್ದರು. ಅಲ್ಲದೇ ಭಾರತ ಗೆಲುವಿನ ಫೇವರೆಟ್ ತಂಡ ಎಂದು ಹೇಳಿದ್ದರು. ಮೊದಲ ಮೂರು ಪಂದ್ಯಗಳನ್ನು ಉತ್ತಮ ರೀತಿಯಲ್ಲಿ ಗೆದ್ದ ತಂಡ ಪ್ಲೇ ಆಫ್ ಪ್ರವೇಶದ ಹಾದಿಯನ್ನಂತೂ ಸರಳೀಕರಿಸಿದೆ. ಆದರೆ ಭಾರತಕ್ಕೆ ಇನ್ನು ಆರು ಪಂದ್ಯಗಳು ಬಾಕಿ ಇದ್ದು ಅವುಗಳ ಪೈಕಿ ಮೂರು ತಂಡಗಳು ಪ್ರಬಲ ಪೈಪೋಟಿ ನೀಡಬಲ್ಲವು.
ಮುಂದಿನ ಸವಾಲು: ಭಾರತ ಮುಂದೆ ಕ್ರಮವಾಗಿ ಬಾಂಗ್ಲಾದೇಶ (ಅ.19), ನ್ಯೂಜಿಲೆಂಡ್ (ಅ.22), ಇಂಗ್ಲೆಂಡ್ (ಅ.29), ಶ್ರೀಲಂಕಾ (ನ.2), ದಕ್ಷಿಣ ಆಫ್ರಿಕಾ (ನ.5) ಮತ್ತು ನೆದರ್ಲೆಂಡ್ (ನ.12) ತಂಡಗಳನ್ನು ಎದುರಿಸಲಿದೆ. ಪ್ರಸ್ತುತ ವಿಶ್ವಕಪ್ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರಬಲ ಎದುರಾಳಿಗಳು ಎಂದು ಗುರುತಿಸಬಹುದು. ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಇತ್ತೀಚೆಗೆ ಏಷ್ಯಾಕಪ್ನಲ್ಲಿ ಮಣಿಸಿರುವುದರಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ವೆಸ್ಟ್ ಇಂಡೀಸ್ ಮಣಿಸಿ ವಿಶ್ವಕಪ್ ಪ್ರವೇಶಿಸಿದ ನೆದರ್ಲೆಂಡ್ ದೊಡ್ಡ ಆತಂಕವಾಗದು. ಅದು ಕೊನೆಯ ಪಂದ್ಯವಾಗುವ ಕಾರಣ ರನ್ರೇಟ್ಗಾಗಿ ಭಾರತ ಉತ್ತಮ ಪ್ರದರ್ಶನ ನೀಡಬೇಕಾಗಬಹುದು.
ಭಾರತ vs ನ್ಯೂಜಿಲೆಂಡ್: ವಿಶ್ವಕಪ್ನಲ್ಲಿ ಭಾರತ-ಕಿವೀಸ್ 9 ಬಾರಿ ಮುಖಾಮುಖಿಯಾಗಿವೆ. ಅಂಕಿಅಂಶದಂತೆ, ಇತಿಹಾಸದಲ್ಲಿ ಭಾರತ 5 ಪಂದ್ಯಗಳನ್ನು ಗೆದ್ದು 3ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ರದ್ದಾಗಿದೆ. ಅಂಕಿಸಂಖ್ಯೆಯ ಪರಿಗಣನೆಗಿಂತ ಈ ಬಾರಿ ಕಿವೀಸ್ ಪ್ರದರ್ಶನ ಗಮನಾರ್ಹವಾಗಿದೆ. ಸತತ ಮೂರು ಪಂದ್ಯಗಳಲ್ಲಿ ದೊಡ್ಡ ಗೆಲುವು ದಾಖಲಿಸಿದೆ. ಅದರಲ್ಲೂ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಸಿ ಚೊಚ್ಚಲ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಕಿವೀಸ್ಗೆ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದ ಹೊರಗಿರುವುದು ಋಣಾತ್ಮಕ ಅಂಶ ಆಗಬಹುದು. ಆದರೆ, ಮೊದಲೆರಡು ಪಂದ್ಯವನ್ನು ಕೇನ್ ಇಲ್ಲದೇ ಕಿವೀಸ್ ಜಯಿಸಿತ್ತು.
ಭಾರತ vs ಇಂಗ್ಲೆಂಡ್: ಆಂಗ್ಲರ ಜೊತೆ ಭಾರತ ವಿಶ್ವಕಪ್ನಲ್ಲಿ 8 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ 3 ಗೆದ್ದು, 4ರಲ್ಲಿ ಸೋತಿದೆ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ನಲ್ಲಿ ಪಂದ್ಯ ಟೈ ಕಂಡಿತ್ತು. ಭಾರತಕ್ಕೆ ಆಂಗ್ಲರ ವಿರುದ್ಧ ಜಯದ ಸಂಖ್ಯೆಯನ್ನು ಸಮಬಲ ಮಾಡಿಕೊಳ್ಳಲು ಈ ಬಾರಿ ಗೆಲುವು ದಾಖಲಿಸಬೇಕಿದೆ. ಆಂಗ್ಲರಲ್ಲಿ 11 ಆಟಗಾರರು ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದು, ಬಲಿಷ್ಠ ಆಲ್ರೌಂಡರ್ ತಂಡವಾಗಿ ವಿಶ್ವಕಪ್ಗೆ ಇಳಿದಿದೆ. 2019ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ನೆಲದಲ್ಲಿ ಭಾರತ 31 ರನ್ಗಳ ಸೋಲು ಕಂಡಿತ್ತು. ಈ ಸೇಡನ್ನು ತವರು ಮೈದಾನದಲ್ಲಿ ಭಾರತ ತೀರಿಸಿಕೊಳ್ಳಬೇಕಿದೆ.
ಭಾರತ vs ದಕ್ಷಿಣ ಆಫ್ರಿಕಾ: ಹರಿಣಗಳ ತಂಡ ಚೊಚ್ಚಲ ವಿಶ್ವಕಪ್ ಗೆಲುವಿಗೆ ಎದುರು ನೋಡುತ್ತಿದ್ದು, ಈ ವರ್ಷ ಭರ್ಜರಿ ಪ್ರದರ್ಶನ ನೀಡುತ್ತಾ ಬರುತ್ತಿದೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದ ವಿರುದ್ಧ ಹರಿಣಗಳು 100ಕ್ಕೂ ಹೆಚ್ಚು ರನ್ಗಳ ಅಂತರದಲ್ಲಿ ಜಯ ಸಾಧಿಸಿದೆ. ಅಲ್ಲದೇ ತಂಡದ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹಿಂದಿನ ವಿಶ್ವಕಪ್ನಲ್ಲಿ ಭಾರತ ದ.ಆಫ್ರಿಕಾದೊಂದಿಗಿನ 5 ಪಂದ್ಯದಲ್ಲಿ ಮುಖಾಮುಖಿಯಲ್ಲಿ 3 ಗೆದ್ದು, 2ರಲ್ಲಿ ಸೋಲು ಕಂಡಿದೆ.
ಈ ಮೂರು ತಂಡಗಳಲ್ಲಿ ಭಾರತ ಎರಡನ್ನಾದರೂ ಮಣಿಸಲೇಬೇಕಿದೆ. ಬಲಿಷ್ಠ ತಂಡಗಳನ್ನು ಸೋಲಿಸಿದಲ್ಲಿ ಉಳಿದಂತೆ ಬಾಂಗ್ಲಾ, ಶ್ರೀಲಂಕಾ, ನೆದರ್ಲೆಂಡ್ ಮೇಲೆ ಸುಲಭ ಜಯ ಸಾಧಿಸಬಹುದು. ಆದರೆ ಈ ತಂಡಗಳನ್ನು ಕಡೆಗಣಿಸುವಂತಿಲ್ಲ. ಶ್ರೀಲಂಕಾ ವಿರುದ್ಧ 9 ಮುಖಾಮುಖಿಯಲ್ಲಿ ಭಾರತ 4 ಸೋಲು, 4 ಗೆಲುವು 1 ಪಂದ್ಯ ರದ್ದಾಗಿದೆ. ಸಿಂಹಳೀಯರು ಸಮಾನ ಪೈಪೋಟಿ ನೀಡಿದ್ದಾರೆ. ಆದರೆ ಈ ಬಾರಿ ಲಂಕಾ ತಂಡ ದುರ್ಬಲವಾಗಿದೆ ಎಂದೇ ಹೇಳಬಹುದು. ಬಾಂಗ್ಲಾ ಒಮ್ಮೆ ಭಾರತವನ್ನು ವಿಶ್ವ ವೇದಿಕೆಯಲ್ಲಿ ಮಣಿಸಿದ್ದು ಗಮನಾರ್ಹ.
ಇದನ್ನೂ ಓದಿ: ಕೊಹ್ಲಿಯಿಂದ ಪಾಕ್ ಕ್ರಿಕೆಟಿಗ ಬಾಬರ್ ಅಜಂಗೆ ಜರ್ಸಿ ಗಿಫ್ಟ್: ವಾಸಿಂ ಅಕ್ರಮ್ ಟೀಕೆ