ಫ್ಲೋರಿಡಾ: ನಾಲ್ಕನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 191ರನ್ಗಳಿಕೆ ಮಾಡಿದೆ. ಈ ಮೂಲಕ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ರನ್ ಗುರಿ ಮುಂದಿಟ್ಟಿದೆ. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ರೋಹಿತ್-ಸೂರ್ಯಕುಮಾರ್ ಜೋಡಿ ಉತ್ತಮ ಬುನಾದಿ ಹಾಕಿತು.ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 53ರನ್ಗಳಿಕೆ ಮಾಡಿತು. 16 ಎಸೆತಗಳಲ್ಲಿ 33ರನ್ಗಳಿಕೆ ಮಾಡಿದ್ದ ರೋಹಿತ್ ಹುಸೈನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಯಾದವ್ ಕೂಡ ಜೋಸೆಫ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಇದಾದ ಬಳಿಕ ಬಂದ ದೀಪಕ್ ಹೂಡಾ(21), ವಿಕೆಟ್ ಕೀಪರ್ ಪಂತ್ (44) ತಂಡಕ್ಕೆ ಮತ್ತಷ್ಟು ಚೇತರಿಕೆ ನೀಡಿದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಅಜೇಯ 30ರನ್ಗಳಿಕೆ ಹಾಗೂ ಅಕ್ಸರ್ ಪಟೇಲ್ ಕೇವಲ 8 ಎಸೆತಗಳಲ್ಲಿ ಸ್ಫೋಟಕ 20ರನ್ಗಳಿಕೆ ಮಾಡಿ, ತಂಡ 190ರ ಗಡಿ ದಾಟುವಂತೆ ಮಾಡಿದರು.ವೆಸ್ಟ್ ಇಂಡೀಸ್ ಪರ ಮೆಕಾಯ್, ಜೋಸೆಫ್ ತಲಾ 2 ವಿಕೆಟ್ ಪಡೆದರೆ, ಹುಸೈನ್ 1 ವಿಕೆಟ್ ಕಿತ್ತರು.
ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್ ನಡುವೆ ನಾಲ್ಕನೇ ಟಿ-20 ಪಂದ್ಯ ಫ್ಲೋರಿಡಾದಲ್ಲಿ ನಡೆಯುತ್ತಿದೆ. ಟಾಸ್ ತೆದ್ದ ಕೆರಿಬಿಯನ್ ತಂಡ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಫ್ಲೋರಿಡಾ ಮೈದಾನದಲ್ಲಿ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯುತ್ತಿದ್ದು, ಸರಣಿ ಜೀವಂತವಾಗಿಟ್ಟುಕೊಳ್ಳಲು ಪೂರನ್ ಪಡೆಗೆ ಈ ಪಂದ್ಯ ಮಹತ್ವದಾಗಿದೆ.ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಮೂರು ಬದಲಾವಣೆ ಮಾಡಿಕೊಂಡಿದೆ.
ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಸರಣಿ ಜಯಿಸುವ ತವಕದಲ್ಲಿದೆ. ಆದರೆ, ಇಂದಿನ ಪಂದ್ಯ ಕೆರಿಬಿಯನ್ ಪಾಲಿಗೆ ಮಾಡು ಇಲ್ಲವೆ ಮಡಿಯಾಗಿದ್ದು, ತಿರುಗೇಟು ನೀಡುವ ಹುಮ್ಮಸ್ಸಿನಲ್ಲಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಸ್ವಲ್ಪ ಗಂಟೆ ಮುಂಚಿತವಾಗಿ ಮಳೆ ಸುರಿದ ಕಾರಣ, ಇಂದಿನ ಪಂದ್ಯ ಸಹ ಅರ್ಧಗಂಟೆ ತಡವಾಗಿ ಆರಂಭಗೊಂಡಿದೆ.
ಟೀಂ ಇಂಡಿಯಾ ಫ್ಲೇಯಿಂಗ್ XI: ರೋಹಿತ್ ಶರ್ಮಾ(ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ಫ್ಲೇಯಿಂಗ್ XI: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ಜೇಸನ್ ಹೋಲ್ಡರ್, ಡೊಮಿನಿಕ್ ಡ್ರೇಕ್ಸ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
ಇದನ್ನೂ ಓದಿರಿ: CWG 2022: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಬಗ್ಗುಬಡಿದು ಫೈನಲ್ಗೆ ಲಗ್ಗೆ ಇಟ್ಟ ಟೀಂ ಇಂಡಿಯಾ
ಇದೇ ತಿಂಗಳಲ್ಲಿ ಏಷ್ಯಾಕಪ್ ಟಿ20 ಸರಣಿ ಆಯೋಜನೆಗೊಳ್ಳಲಿರುವ ಕಾರಣ ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡಿದೆ. ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವಕಾಶ ಪಡೆದುಕೊಂಡಿದ್ದು, ಅರ್ಷದೀಪ್ ಸಿಂಗ್ಗೆ ಅವಕಾಶ ನೀಡಲಾಗಿದೆ. ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ.