ಅಬುಧಾಬಿ: ಭಾರತ ತಂಡಕ್ಕೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿರುವುದನ್ನು ಸ್ವಾಗತಿಸಿರುವ ಉಪನಾಯಕ ರೋಹಿತ್ ಶರ್ಮಾ, ಲೆಜೆಂಡರಿ ಕ್ರಿಕೆಟಿಗನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಜಯದ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ನಾವು ಅಫ್ಘಾನಿಸ್ತಾನದ ವಿರುದ್ಧ ಪಂದ್ಯವನ್ನಾಡುತ್ತಿದ್ದರಿಂದ ಇದರ ಬಗ್ಗೆ ಯಾವುದೆ ಮಾಹಿತಿಯಿಲ್ಲ. ಭಾರತ ತಂಡಕ್ಕೆ ವಿಭಿನ್ನ ಸಾಮರ್ಥ್ಯದೊಂದಿಗೆ ವಾಪಸಾಗಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
"ಅವರು(ದ್ರಾವಿಡ್) ಭಾರತದ ಕ್ರಿಕೆಟ್ ತಂಡದ ಧೀಮಂತ ಕ್ರಿಕೆಟಿಗನಾಗಿದ್ದು, ಅವರೊಂದಿಗೆ ಭವಿಷ್ಯದಲ್ಲಿ ಕೆಲಸ ಮಾಡುವುದು ತುಂಬಾ ಸೊಗಸಾಗಿರಲಿದೆ ಎಂದು ಭಾವಿಸುತ್ತೇನೆ" ಎಂದು 74 ರನ್ ಸಿಡಿಸಿ ಅಫ್ಘಾನ್ ವಿರುದ್ಧ 66 ರನ್ಗಳ ಜಯಕ್ಕೆ ಕಾರಣರಾದ ರೋಹಿತ್ ಹೇಳಿದ್ದಾರೆ.
ಎನ್ಸಿಎ ಅಧ್ಯಕ್ಷರಾಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ 2 ವರ್ಷಗಳ ಅವಧಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದಾಗಿ ಬುಧವಾರ ಘೋಷಿಸಿತ್ತು. 2021ರ ಟಿ20 ವಿಶ್ವಕಪ್ ನಂತರ, ನ್ಯೂಜಿಲೆಂಡ್ ತಂಡವು ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಿಂದಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನು ಓದಿ:ದ್ರಾವಿಡ್ಗೆ ತಂಡವನ್ನು ಮುನ್ನಡೆಸುವ ಪಾಠ ಮಾಡ್ಬೇಡಿ, ಅವರಿಚ್ಛೆಯಂತೆ ಬಿಟ್ಬಿಡಿ: ಬಿಸಿಸಿಐಗೆ ಜಡೇಜಾ ಮನವಿ