ಡರ್ಹಮ್ (ಇಂಗ್ಲೆಂಡ್): ಭಾರತ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಈಗಾಗಲೇ ಮೀಸಲು ವೇಗಿ ಆವೇಶ್ ಖಾನ್ ಗಾಯಗೊಂಡಿದ್ದರು. ಸರಣಿ ನಡೆಯಲು ಎರಡು ವಾರವಿರುವಾಗ ಆಟಗಾರರ ಗಾಯದ ಸಮಸ್ಯೆ ಭಾರತ ತಂಡಕ್ಕೆ ತಲೆನೋವಾಗಿದೆ.
ಆಗಸ್ಟ್ 4 ರಿಂದ ಆಂಗ್ಲರ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ವಾಷಿಂಗ್ಟನ್ ಮತ್ತು ಆವೇಶ್ ಇಬ್ಬರೂ ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ. ಆವೇಶ್ ಖಾನ್ಗೆ ಬೆರಳು ಮುರಿದಿದ್ದರೆ, ಸುಂದರ್ಗೆ ಯಾವ ಪ್ರಮಾಣದ ಗಾಯವಾಗಿದೆ ಅನ್ನೋದು ಇನ್ನು ಖಚಿತವಾಗಿಲ್ಲ. ಮೂಲಗಳ ಮಾಹಿತಿಯ ಪ್ರಕಾರ, ಅವರಿಗೆ 5ರಿಂದ 7 ವಾರಗಳ ವಿಶ್ರಾಂತಿ ಅಗತ್ಯವಿದೆ. ಆದರೆ ಈ ಇಬ್ಬರು ಆಟಗಾರರು ಮುಂದಿನ ಇಂಗ್ಲೆಂಡ್ ಪ್ರವಾಸದ ಭಾಗವಾಗಿರುವುದಿಲ್ಲ ಅನ್ನೋದು ಖಚಿತವಾಗಿದೆ.
ಈಗಾಗಲೇ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಮೊಣಕಾಲಿನ ಗಾಯಕ್ಕೊಳಗಾಗಿ ಪ್ರವಾಸದಿಂದ ಹೊರಬಿದ್ದಿದ್ದರು. ಅವರು ಬುಧವಾರವಷ್ಟೇ ತವರಿಗೆ ಮರಳಿದ್ದಾರೆ. ಆದರೆ ಇಲ್ಲಿಯವರೆಗೂ ಗಿಲ್ ಬದಲಿ ಆಟಗಾರರನ್ನು ಬಿಸಿಸಿಐ ಘೋಷಿಸಿಲ್ಲ. ಇದೀಗ ವೇಗಿ ಮತ್ತು ಉದಯೋನ್ಮುಖ ಆಲ್ರೌಂಡರ್ ಕೂಡ ಹೊರಬಿದ್ದಿರುವುದು ತಂಡಕ್ಕೆ ಸಂಕಷ್ಟ ತಂದಿದೆ. ಸುಂದರ್ ಮತ್ತು ಆವೇಶ್ ಖಾನ್ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕೌಂಟಿ ಇಲೆವೆನ್ ತಂಡದಲ್ಲಿ ಆಡಿದ್ದರು.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ 24 ಸದಸ್ಯರ ತಂಡವೀಗ 21ಕ್ಕೆ ಕುಸಿದಿದೆ. ಪ್ರಸ್ತುತ ಭಾರತ ವೈಟ್ ಬಾಲ್ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಸರಣಿ ಮುಗಿದ ಮೇಲೆ ಬದಲಿ ಆಟಗಾರರನ್ನು ನೇಮಿಸಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಭಾರತ - ಇಂಗ್ಲೆಂಡ್ ಪಂದ್ಯ: ಸರಣಿಯಿಂದ Avesh Khan ಹೊರಕ್ಕೆ!