ಮೆಲ್ಬೋರ್ನ್: ನಾನು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯಾಗುವ ಮುನ್ನ 2023ರ ಆ್ಯಶಸ್ ಟೆಸ್ಟ್ ಸರಣಿ ಮತ್ತು ಭಾರತದಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲುವುದಕ್ಕೆ ಬಯಸುತ್ತೇನೆ ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಮಂಗಳವಾರ ಇನ್ನು 2 ಪಂದ್ಯಗಳುಳಿದಿರುವಂತೆ ಆ್ಯಶಸ್ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ವರ್ಷ ಅಕ್ಟೋಬರ್ನಲ್ಲಿ 35ನೇ ವಸಂತಕ್ಕೆ ಕಾಲಿಟ್ಟಿರುವ ವಾರ್ನರ್ ಯುಎಇನಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ, ಇವರ ಪ್ರಕಾರ ತಾವು ಸಾಧಿಸಬೇಕಾಗಿದ್ದು ಇನ್ನೂ ಇದೆ ಎಂದಿದ್ದಾರೆ.
ನಾವು ಇನ್ನೂ ಭಾರತದಲ್ಲಿ ಭಾರತವನ್ನು ಮಣಿಸಲಾಗಿಲ್ಲ. ಅದನ್ನು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಮತ್ತು ಇಂಗ್ಲೆಂಡ್ನಲ್ಲಿ ಆ್ಯಶಸ್ ಗೆಲ್ಲುವುದು. ನಾವು 2019ರಲ್ಲಿ ಡ್ರಾ ಸಾಧಿಸಿಕೊಂಡಿದ್ದೆವು. ಆದರೆ, ನನಗೆ ಅಲ್ಲಿಗೆ ತೆರಳುವು ಅದೃಷ್ಟ ಮತ್ತು ಅವಕಾಶ ದೊರೆತರೆ , ಅಲ್ಲಿ ಮತ್ತೆ ತೆರಳಲು ಯೋಚಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾರ್ನರ್ ಹೇಳಿದ್ದಾರೆ.
ವಾರ್ನರ್ ಇಂಗ್ಲೆಂಡ್ನಲ್ಲಿ 13 ಮತ್ತು ಭಾರತದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆದರೆ, ಎರಡೂ ರಾಷ್ಟ್ರಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಇಂಗ್ಲೆಂಡ್ನಲ್ಲಿ 26 ಮತ್ತು ಭಾರತದಲ್ಲಿ 24ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಆದರೆ, ಮುಂದಿನ ಪ್ರವಾಸದ ವೇಳೆ 37ನೇ ವಯಸ್ಸಿಗೆ ಕಾಲಿಡಲಿರುವ ವಾರ್ನರ್, ವಯಸ್ಸು ಕೇವಲ ಸಂಖ್ಯೆಗಳಷ್ಟೇ ಎಂದಿದ್ದಾರೆ.
ನಮ್ಮಂತ ಹಿರಿಯರಿಗೆ ಜೇಮ್ಸ್ ಆ್ಯಂಡರ್ಸನ್ ಮಾದರಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ನಾವೆಲ್ಲರೂ ಅವರನ್ನು ನೋಡಿ ಪ್ರೇರಣೆ ತೆಗೆದುಕೊಳ್ಳಬೇಕು, ಆದರೆ, ನನ್ನ ಪ್ರಕಾರ ತಂಡಕ್ಕಾಗಿ ಉತ್ತಮ ಪ್ರದರ್ಶನ ತೋರುವುದು ಮತ್ತು ರನ್ಗಳಿಸುವುದರ ಮೇಲೆ ಎಲ್ಲ ನಿಂತಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇನ್ನಿಂಗ್ಸ್ ಸೋಲಿನೊಂದಿಗೆ 18 ವರ್ಷಗಳ ಹಿಂದಿನ ಬೇಡದ ದಾಖಲೆಗೆ ಪಾತ್ರವಾದ ಇಂಗ್ಲೆಂಡ್!